ಕಡೆಗಣನೆ ಸರಿಹೋಗದಿದ್ದರೆ ಕಾದು ನೋಡಿ

PRADEEP SHETTAR NEW
Published on

ಹುಬ್ಬಳ್ಳಿ : ಬಿಜೆಪಿಯಲ್ಲಿ ಲಿಂಗಾಯತ ನಾಯಕರ ಕಡೆಗಣನೆ 15 ದಿನಗಳಲ್ಲಿ ಸರಿಹೋಗುತ್ತದೆ. ಇಲ್ಲದಿದ್ದರೆ 15 ದಿನಗಳ ನಂತರ ಏನಾಗುತ್ತದೆ ಎಂಬುದನ್ನು ಕಾದುನೋಡಿ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಹೇಳಿದ್ದಾರೆ.

ಸೋಮವಾರ ಇಲ್ಲಿನ ದೇಶಪಾಂಡೆ ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮುಖಂಡರು ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಿಂಗಾಯತ ನಾಯಕರಿಗೆ ಆಗುತ್ತಿರುವ ಅನ್ಯಾಯದ ಕುರಿತು ಶೀಘ್ರ ಬಹಿರಂಗಪಡಿಸುವುದಾಗಿ ತಿಳಿಸಿದರು. ನಿನ್ನೆ (ಭಾನುವಾರ) ನೀಡಿದ ನನ್ನ ಹೇಳಿಕೆ ವಿರುದ್ಧ ಖಂಡನೀಯ ಪತ್ರವನ್ನು ಧಾರವಾಡ ಗ್ರಾಮಾಂತರ ಅಧ್ಯಕ್ಷ ಬಸವರಾಜ ಕುಂದಗೋಳಮಠ ಅವರು ಬರೆದಿದ್ದಲ್ಲ. ಬದಲಾಗಿ, ಅವರಿಂದ ಬೇರೆಯವರು ಬರೆಸಿರುವ ಸಾಧ್ಯತೆ ಇದೆ. ಪಕ್ಷದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಬಸವರಾಜ ಕುಂದಗೋಳಮಠ ಅವರಲ್ಲಿಯೂ ಒಂದಿಷ್ಟು ಅಸಮಾಧಾನ ಇದೆ. ಆದರೆ, ಅವರು ತೋಡಿಕೊಂಡಿಲ್ಲ ಎಂದರು.

ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಬಿಡುವ ಬಗ್ಗೆ ಯೋಚಿಸಿಲ್ಲ. ಪಕ್ಷದಲ್ಲಿ ಇರುವ ಒಂದಿಷ್ಟು ಗೊಂದಲಗಳ ಬಗ್ಗೆ ಮಾತನಾಡಿದ್ದೇನೆ ಅಷ್ಟೆ. ಈ ಬಗ್ಗೆ ಸಭೆಯಲ್ಲಿಯೂ ಪಕ್ಷದ ಪ್ರಮುಖರಿಗೆ ತಿಳಿಸಿದ್ದೇನೆ ಎಂದರು.

ಬಿಜೆಪಿಯಲ್ಲಿ ಲಿಂಗಾಯತರ ಕಡೆಗಣನೆ ಕುರಿತು ಭಾನುವಾರ ಅಷ್ಟೇ ಪ್ರದೀಪ ಶೆಟ್ಟರ್ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ದೇಶಪಾಂಡೆ ನಗರದ ಬಿಜೆಪಿ ಕಚೇರಿಗೆ ಸೋಮವಾರ ಆಗಮಿಸಿ, ಪಕ್ಷದ ಸಂಘಟನೆ ಹಾಗೂ ಇನ್ನಿತರ ವಿಷಯಗಳ ಕುರಿತ ಸಭೆಯಲ್ಲಿ ಪಾಲ್ಗೊಂಡರು.

ಸಭೆಯಲ್ಲಿ ಸಂಘಟನೆ ಹಾಗೂ ಇನ್ನಿತರ ಚರ್ಚೆಗಳು ನಡೆದವು. ನಾನು ಸದಾ ಪಕ್ಷದೊಂದಿಗೆ ಇರುತ್ತೇನೆ ಎಂಬುದನ್ನು ಸ್ಪಷ್ಟಪಡಿಸಿದ್ದೇನೆ ಎಂದು ಪ್ರದೀಪ ಶೆಟ್ಟರ್ ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಅಧ್ಯಕ್ಷ ಸಂಜಯ ಕಪಟಕರ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಇಂದಿನ ಬಿಜೆಪಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಂಘಟನೆ ಬಗ್ಗೆ ಚರ್ಚೆ ನಡೆದಿದೆ. ಬೇರೆ ವಿಷಯ ಚರ್ಚೆಗೆ ಬಂದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net