ಅನುದಾನಕ್ಕಾಗಿ ಸರ್ಕಾರದ ವಿರುದ್ಧ ಪ್ರತಿಭಟಿಸಲಿ

mlc mtb pressmeet
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಈ ಹಿಂದೆ ಹೊಸಕೋಟೆಗೆ ನೀಡಿದ್ದ 10 ಕೋಟಿ ರೂ.ಅನುದಾನ ತಡೆಹಿಡಿದಿದ್ದಾರೆ ಎಂದು ನನ್ನ ಮೇಲೆ ಆರೋಪಿಸಿದ್ದ ಶಾಸಕ ಶರತ್‌ಬಚ್ಚೇಗೌಡ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ್ದರು. ಈಗ ಸರ್ಕಾರವೇ ಅನುದಾನ ನೀಡಲು ಸಾಧ್ಯವಿಲ್ಲ ಎನ್ನುತ್ತಿದೆ. ಈ ಬಗ್ಗೆ ಪ್ರತಿಭಟನೆ ಮಾಡಿ ಅನುದಾನ ತರಲಿ ಎಂದು ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು.
ಗರುಡಾಚಾರ್‌ಪಾಳ್ಯದ ಗೃಹಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುವುದಿಲ್ಲವೇ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ತರಬೇಕಾದ ಶಾಸಕರು ಮೌನವಾಗಿದ್ದಾರೆ ಎಂದು ಟೀಕಿಸಿದರು.
ಕಂದಾಯ ಸಚಿವರಿಗೆ ಮನವಿ: ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ನೂರಾರು ಎಕರೆ ಸರ್ಕಾರಿ ಜಮೀನುಗಳಿವೆ, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅಕ್ರಮವಾಗಿ ದಾಖಲೆ ಸೃಷ್ಟಿ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದೆ. ಇದನ್ನು ಕಂದಾಯ ಸಚಿವರು ಗಂಭೀರವಾಗಿ ಪರಿಗಣಿಸಬೇಕು ಎಂದು ಎಂಟಿಬಿ ಮನವಿ ಮಾಡಿದರು. ಸರ್ಕಾರಿ ಜಾಗಗಳನ್ನು ಗುರಿತಿಸಿ ಅವುಗಳ ಸಂರಕ್ಷಿಸಬೇಕಿದೆ, ಇಲ್ಲವಾದರೆ ಅಕ್ರಮವಾಗಿ ಸ್ಮಶಾನಭೂಮಿ, ಗುಂಡುತೋಪು ಸೇರಿ ಎಲ್ಲವನ್ನೂ ಕಬಳಿಸುತ್ತಾರೆ. ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳದಿದ್ದರೆ ಇದರ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಸಚಿವರು ರಾಜ್ಯ ಸುತ್ತಾಡಲಿ: ಈ ಹಿಂದೆ ಸಚಿವನಾಗಿದ್ದಾಗ ಕೇವಲ ತಾಲೂಕಿಗೆ ಸೀಮಿತವಾಗಿದ್ದಾರೆ ಎಂದು ಪ್ರತಿಪಕ್ಷದವರು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದರು. ಈಗ ಉಸ್ತುವಾರಿ ಸಚಿವರಾಗಿರುವ ಕೆ.ಎಚ್.ಮುನಿಯಪ್ಪ ಕೇವಲ ತಾಲೂಕಿಗೆ ಸೀಮಿತವಾಗದೆ ರಾಜ್ಯ ಸುತ್ತಾಡಿ ಬಡಜನರ ಸೇವೆ ಮಾಡಲಿ ಎಂದರು.
ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ: ಅಕ್ಕಿ ಬದಲು ಹಣ ನೀಡಿ ಸರ್ಕಾರ ಜನರಿಗೆ ವಂಚಿಸುತ್ತಿದೆ, ಚುನಾವಣಾ ಪೂರ್ವದಲ್ಲಿ ಯಾವುದೇ ಷರತ್ತು ವಿಧಿಸಿದೆ ಭರವಸೆ ನೀಡಿದ್ದ ಕಾಂಗ್ರೆಸ್ ಮುಖಂಡರು ಈಗ ಗ್ಯಾರಂಟಿ ಯೋಜನೆಗಳ ಜಾರಿಗೆ ಹಲವು ಷರತ್ತುಗಳನ್ನು ವಿಧಿಸಿದ್ದಾರೆ. ಜನರ ದಿಕ್ಕು ತಪ್ಪಿಸಿ ಚುನಾವಣೆ ಎದುರಿಸಿದ್ದಾರೆ ಎಂದು ಆರೋಪಿಸಿದರು. 5 ಗ್ಯಾರಂಟಿಗಳನ್ನು ಯಾವುದೇ ಷರತ್ತು ಹಾಕದೆ ಅರ್ಹ ಲಾನುಭವಿಗಳಿಗೆ ತಲುಪಿಸಬೇಕು ಇದು ಎಷ್ಟ ಮಟ್ಟಿಗೆ ಸಾಕಾರಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net