ಅತಂತ್ರ ಸರ್ಕಾರ ರಚನೆಗೆ ಅವಕಾಶ ಕೊಡದೇ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ: ಜೆಡಿಎಸ್ ಎಂಎಲ್‌ಸಿ ಮರಿತಿಬ್ಬೇಗೌಡ ಮನವಿ

Marithbegowda)
Published on

ಮಂಡ್ಯ: ರಾಜ್ಯದಲ್ಲಿ ಮತ್ತೊಮ್ಮೆ ಅತಂತ್ರ ಸರ್ಕಾರ ಬರುವುದಕ್ಕೆ ಅವಕಾಶ ಕೊಡಬೇಡಿ. ಹಿಂದೆ ಅಸ್ಥಿತ್ವಕ್ಕೆ ಬಂದ ಸಮ್ಮಿಶ್ರ ಸರ್ಕಾರ ಅವಧಿ ಪೂರ್ಣಗಳಿಸಲಿಲ್ಲ. ಇನ್ನು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದ ಬಿಜೆಪಿಗೆ ತಕ್ಕ ಪಾಠ ಕಲಿಸುವುದರ ಜತೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮನವಿ ಮಾಡಿದರು.

ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ನಾವು ತಿನ್ನುವ ಆಹಾರಕ್ಕೂ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ಇದೆ. ಬ್ರಿಟಿಷ್‌ರ ಬಳಿಕ ತೆರಿಗೆ ಪದ್ಧತಿಯನ್ನು ಬಿಜೆಪಿ ಜಾರಿಗೆ ತಂದಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಜೀವನ ನಡೆಸಲು ಕಷ್ಟಪಡುವಂತಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.

ಬಿಜೆಪಿ ಸರ್ಕಾರ ಮಂಡ್ಯ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಒಂದೇ ಒಂದು ಗುರುತರ ಉದ್ಯಮ ಅಥವಾ ಕೈಗಾರಿಕೆಯನ್ನು ಸ್ಥಾಪನೆ ಮಾಡಲಿಲ್ಲ. ಇದರಿಂದಾಗಿ ಯುವ ಜನತೆ ಉದ್ಯೋಗ ಹರಸಿ ಅಕ್ಕಪಕ್ಕದ ಜಿಲ್ಲೆಗಳಿಗೆ ವಲಸೆ ಹೋಗುವಂತಾಯಿತು. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸುಮಾರು 42 ಸಾವಿರ ಶಿಕ್ಷಕ ಹುದ್ದೆಗಳು ಖಾಲಿ ಉಳಿದಿದ್ದು, ಏಳೆಂಟು ವರ್ಷದಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ 6 ಸಾವಿರ ಜನರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಅವರನ್ನು ಸಂಕಷ್ಟಕ್ಕೆ ದೂಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರಿಗೆ ಕನಿಷ್ಠ 10 ಗಂಟೆ ವಿದ್ಯುತ್ ನೀಡಲಾಗುತ್ತಿಲ್ಲ. ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಗಳನ್ನು ಕೃಷಿ ಇಲಾಖೆಗೆ ಸೇರ್ಪಡೆ ಮಾಡಿ 2 ಸಾವಿರ ಹುದ್ದೆಗಳನ್ನು ರದ್ದುಪಡಿಸುವಂತೆ ಸಂಪುಟದ ಉಪ ಸಮಿತಿ ಶಿಫಾರಸ್ಸು ಮಾಡಿದ್ದು, ಈ ಸರ್ಕಾರದ ಬಹುದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದ ಅವರು, ಮೈಷುಗರ್ ಕಾರ್ಖಾನೆ ಸೇರಿದಂತೆ ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್ ಹಾಗೂ ಬಿಜೆಪಿಯಾಗಲೀ ಆದ್ಯತೆ ನೀಡಿಲ್ಲ. ಈ ಎಲ್ಲದರ ಹಿನ್ನೆಲೆಯಲ್ಲಿ ಈ ಬಾರಿ 5 ವರ್ಷಗಳ ಕಾಲ ಸುಭದ್ರ ಆಡಳಿತ ನೀಡುವಂತಾಗಲು ಜನತೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ವಿರುದ್ಧ ಪರೋಕ್ಷ ವಾಗ್ದಾಳಿ: ಜಿಲ್ಲೆಯಲ್ಲಿ ರಾಜಕೀಯ ನಾಯಕತ್ವದ ಕೊರತೆ ಕಾಡುತ್ತಿದೆ. ಅವಕಾಶ ಕೊಟ್ಟರೂ ಅಭಿವೃದ್ಧಿ ಮಾಡದ ಹಿನ್ನೆಲೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಹೊಸ ನಾಯಕತ್ವಕ್ಕೆ ಮತದಾರರು ಮುನ್ನುಡಿಯಾಡಬೇಕು ಎಂದು ಪರೋಕ್ಷವಾಗಿ ಜೆಡಿಎಸ್ ವಿರುದ್ಧ ಎಂಎಲ್‌ಸಿ ಮರಿತಿಬ್ಬೇಗೌಡ ವಾಗ್ದಾಳಿ ನಡೆಸಿದರು.

ಎಚ್.ಕೆ.ವೀರಣ್ಣಗೌಡ, ಕೆ.ವಿ.ಶಂಕರಗೌಡ, ಡಾ.ಜಿ.ಮಾದೇಗೌಡ, ಡಾ.ಎಚ್.ಡಿ.ಚೌಡಯ್ಯ, ಎಸ್.ಎಂ. ಕೃಷ್ಣ ಅವರಂತ ಧೀಮಂತ ನಾಯಕರನ್ನು ಮಂಡ್ಯ ಜಿಲ್ಲೆ ಕಂಡಿದೆ. ಇವರೆಲ್ಲರೂ ನಡೆಸಿದ ಹೋರಾಟ ಮತ್ತು ರಾಜಕಾರಣದ ಗಂಭೀರತೆಯಿಂದ ಇಂಡಿಯಾ ಎಂದರೆ ಮಂಡ್ಯ ಎನ್ನುವ ಮಾತು ಪ್ರಚಲಿತಕ್ಕೆ ಬಂದಿತ್ತು. ಆದರಿಂದು ಮಂಡ್ಯ ರಾಜಕೀಯದಲ್ಲಿ ಪ್ರಮುಖ ನಾಯಕರೇ ಕಾಣದಂತಾಗಿದೆ. ಕಾರಣ ಇಲ್ಲಿ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡಿದ್ದು ಮತ್ತು ಭ್ರಷ್ಟ ರಾಜಕಾರಣಿಗಳಿಗೆ ಮಣೆ ಹಾಕಿದ್ದೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ನಿವೃತ್ತ ಪ್ರಾಂಶುಪಾಲ ಕೀಲಾರ ಜಯರಾಂ, ನಿವೃತ್ತ ಪ್ರಾಧ್ಯಾಪಕ ಶಂಕರೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net