

ವಿಜಯವಾಣಿ ಸುದ್ದಿಜಾಲ ಉಡುಪಿ
ಸಂವಿಧಾನ ನೀಡಿರುವ ಹಕ್ಕಿನಂತೆ ಅಧಿಕಾರಿಗಳು ಆಡಳಿತ ನಡೆಸುತ್ತಾರೆ. ಯಾರೇ ಆಗಲಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಭದ್ರಾವತಿ ಶಾಸಕ ಸಂಗಮೇಶ್ ಅವರ ಪುತ್ರ ಅಧಿಕಾರಿಯೊಬ್ಬರಿಗೆ ಅವಹೇಳನ ಮಾಡಿರುವ ಘಟನೆಯ ಬಗ್ಗೆ ನನಗೆ ಸರಿಯಾಗಿ ಮಾಹಿತಿ ಇಲ್ಲ. ಶಾಸಕ ಅಥವಾ ಶಾಸಕನ ಪುತ್ರನಿಗೆ ಕಾನೂನಿನಲ್ಲಿ ಪ್ರತ್ಯೇಕ ಅವಕಾಶ ಇಲ್ಲ. ದೇಶದಲ್ಲಿ ಎಲ್ಲರಿಗೂ ಇರುವುದು ಒಂದೇ ಕಾನೂನು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದರು.
ಉಡುಪಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ಶಾಸಕರ ಪುತ್ರ ಅವಹೇಳನಕಾರಿಯಾಗಿ ಮಾತನಾಡಿದ್ದರೆ ಅಥವಾ ತಪ್ಪು ಮಾಡಿದ್ದರೆ ವೈಯಕ್ತಿಕವಾಗಿ ಮತ್ತು ಪಕ್ಷದ ನೆಲೆಯಲ್ಲಿ ಖಂಡಿಸುತ್ತೇನೆ ಎಂದರು.
ಮೈಸೂರು ಉದಯಗಿರಿ ಘಟನೆಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೊಲೀಸ್ ಠಾಣೆಗೆ ಕಲ್ಲು ತೂರಾಟ ಆಗುತ್ತದೆ ಎಂದು ಬಿಜೆಪಿ ಟೀಕಿಸುತ್ತದೆ. ಎರಡು ವರ್ಷದಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಈಗ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ಕೊಟ್ಟಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಇಡೀ ದೇಶ ಮಣಿಪುರದಂತೆ ಆಗುತ್ತದೆ ಎಂದು ನಾವು ಹೇಳಬಹುದೇ? ಇದಕ್ಕೆ ಬಿಜೆಪಿ ಉತ್ತರ ಕೊಡಲಿ. ಆಮೇಲೆ ಮೈಸೂರು ವಿಚಾರ ನೋಡೋಣ ಎಂದು ಭಂಡಾರಿ ಹೇಳಿದರು.
ಕುಂಭಮೇಳ ಟೀಕಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅಲ್ಲಿ ಮಿಂದುಬಂದ ಡಿ.ಕೆ. ಶಿವಕುಮಾರ್ ಕುರಿತು ನಾನೇನೂ ಹೇಳಲ್ಲ. ಅದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಅವರು ಮಾಡಿದ್ದು ಸರಿ, ತಪ್ಪು ಎಂದು ನಾನು ಮೂಗು ತೂರಿಸುವುದಿಲ್ಲ. ಅವರ ವೈಯಕ್ತಿಕ ವಿಚಾರಧಾರೆಗೆ ಮಧ್ಯದಲ್ಲಿ ನಾನು ಮಾತನಾಡುವುದು ಸರಿಯಲ್ಲ. | ಮಂಜುನಾಥ್ ಭಂಡಾರಿ. ವಿಪ ಸದಸ್ಯ