ಬಡವರಿಗೆ ನಿವೇಶನ ಕಲ್ಪಿಸಲು ಆಗಿಲ್ಲ ; ಎಚ್‌ಡಿಕೆ ವಿರುದ್ಧ ಎಂಎಲ್‌ಸಿ ಲಿಂಗಪ್ಪ ಟೀಕೆ

1 Ramanagara- 01-Congress
Published on

ರಾಮನಗರ: ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾದ ಪತಿ, ಪತ್ನಿ ಕ್ಷೇತ್ರದ ಜನರಿಗೆ ಒಂದೇ ಒಂದು ನಿವೇಶನ ಹಾಗೂ ಮನೆ ಕಲ್ಪಿಸಲು ಸಾಧ್ಯವಾಗಲಿಲ್ಲ. ಈಗ ನಿಖಿಲ್ ಕುಮಾರಸ್ವಾಮಿ ಮುಂದಿನ ಚುನಾವಣೆಗೆ ರೆಡಿಯಾಗುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬದ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ನಗರಸಭೆಯ 4ನೇ ವಾರ್ಡಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ತೇಜಸ್ವಿನಿ ಸುರೇಶ್ ಪರ ಪ್ರಚಾರ ವೇಳೆ ಮಾತನಾಡಿ, ಕ್ಷೇತ್ರದ ಶಾಸಕರಾಗಿ ಗಂಡ-ಹೆಂಡತಿ ಇಷ್ಟು ವರ್ಷ ಅಧಿಕಾರ ಅನುಭವಿಸಿದರು. ತಮ್ಮ ಕುಟುಂಬದಲ್ಲಿಯೇ ಅಧಿಕಾರ ಉಳಿಸಿಕೊಳ್ಳಬೇಕೆಂದು ನಿಖಿಲ್ ಕುಮಾರಸ್ವಾಮಿಯನ್ನು ರೆಡಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಜಿಯಾವುಲ್ಲಾ ಬಡವರಿಗೆ ನಿವೇಶನ ಮತ್ತು ಮನೆ ನೀಡುವ ಕೆಲಸ ಮಾಡಿದರು. ಕಳೆದ 25 ವರ್ಷಗಳಿಂದ ಶಾಸಕರಾಗಿ ಆಯ್ಕೆಯಾಗುತ್ತಿರುವವರು ಒಂದೇ ಒಂದು ನಿವೇಶನ ಅಥವಾ ಮನೆ ನೀಡಲು ಸಾಧ್ಯವಾಗಲಿಲ್ಲ. ಈಗ ಮನೆಗಳನ್ನು ನಿರ್ಮಿಸುವ ನಾಟಕವಾಡಿ ಕ್ಷೇತ್ರದ ಜನರನ್ನು ಯಾಮಾರಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.

ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸದವರ ಸಾಧನೆ ಏನೆಂದು ಜನರು ಪ್ರಶ್ನಿಸಬೇಕು. ಅವರ ಕುಟುಂಬ ಹಾಸನದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳುವಂತೆ ತೀರ್ಪು ನೀಡಬೇಕು ಎಂದು ಲಿಂಗಪ್ಪ ಮನವಿ ಮಾಡಿದರು.

ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಮಾತನಾಡಿ, ಕ್ಷೇತ್ರದಿಂದ ಆಯ್ಕೆಯಾದವರು ಅಭಿವೃದ್ಧಿ ಎಂಬುದನ್ನೆ ಮರೆತಿದ್ದಾರೆ. ನವ ರಾಮನಗರ ನಿರ್ಮಾಣಕ್ಕಾಗಿ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್

ಬೆಂಬಲಿಸುವಂತೆ ಕೋರಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಗಳು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಬೇರು ಇದ್ದಂತೆ. ಆದ್ದರಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.

ನಗರಸಭೆ ಸದಸ್ಯರಾದ ಕೆ. ಶೇಷಾದ್ರಿ, ದೌಲತ್ ಷರೀಫ್, ನಿಜಾಮುದ್ದೀನ್ ಷರೀಪ್, ನಗರಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕುಮಾರ್, ಮುಖಂಡರಾದ ಸಿ.ಎನ್.ಆರ್. .ವೆಂಕಟೇಶ್ ಸಾಹುಕಾರ್ ಅಮ್ಜದ್ , ಕಾಶಿಕ್ , ಶಿವಕುಮಾರಸ್ವಾಮಿ, ನರಸಿಂಹಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net