

ಉಡುಪಿ: ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಸಂದರ್ಭದಲ್ಲಿ ಗೋದ್ರಾದಂಥ ಘಟನೆ ನಡೆದರೆ ಅದಕ್ಕೆ ಕಾಂಗ್ರೆಸ್ ಪಕ್ಷ ಹೊಣೆಯಾಗುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಮತ್ತೊಂದು ಗೋದ್ರಾ ನಡೆಯಬಹುದು ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಸಿದ ಮಾಜಿ ಸಚಿವರು, ಗೋದ್ರಾ ಮಾದರಿ ಘಟನೆ ನಡೆಯಲಿದೆ ಅನ್ನೋದಕ್ಕೆ ನನ್ನ ಬಳಿ ಮಾಹಿತಿ ಇದೆ ಎಂದಿದ್ದಾರೆ. ಆ ಮೂಲಕ ಕರಸೇವೆ ಮಾಡಿ ವಾಪಾಸಾಗುತ್ತಿದ್ದವರ ಮೇಲೆ ಪೆಟ್ರೋಲ್ ಬಾಂಬ್ ಎಸೆದಿರೋದನ್ನು ನೆನೆಪಿಸಿದ್ದಾರೆ. ಗೋದ್ರಾದಂಥ ಘಟನೆ ರಾಜ್ಯದಲ್ಲಿ ಅಥವಾ ದೇಶದಲ್ಲಿ ನಡೆದರೆ ನೇರವಾಗಿ ಕಾಂಗ್ರೆಸ್ ಹೊಣೆಯಾಗುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಬಹುದೊಡ್ಡ ಪಿತೂರಿ ಮಾಡಿದೆ. 31 ವರ್ಷ ಹಳೆಯ ಪ್ರಕರಣ ಕೆದಕಿ ಕರಸೇವಕನನ್ನು ಜೈಲಿಗಟ್ಟುವುದು, 2002ರಲ್ಲಿ ಗೋದ್ರಾದಲ್ಲಿ ಭೋಗಿಗೆ ಬೆಂಕಿ ಹಚ್ಚಿದ ಘಟನೆ ಮತ್ತು ಶ್ರೀರಾಮ ಕಾಲ್ಪನಿಕ ಎನ್ನುವಂಥ ಕಾಂಗ್ರೆಸ್ ಹೇಳಿಕೆ ರಾಮಮಂದಿರ ಉದ್ಘಾಟನಾ ಸಮಯದಲ್ಲಿ ಜನರಲ್ಲಿ ಭಯ ಮೂಡಿಸುವ ಷಡ್ಯಂತ್ರ. ಸರ್ಕಾರ ಇವರ ಹೇಳಿಕೆಯನ್ನು ಲಘುವಾಗಿ ಪರಿಗಣಿಸದೇ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮಂದಿರ ಉದ್ಘಾಟನೆ ಸಂದರ್ಭ ಕರ್ನಾಟಕದಲ್ಲಿ ಅಹಿತಕರ ಘಟನೆ ಸಂಭವಿಸಿದಲ್ಲಿ ಸಿದ್ಧರಾಮಯ್ಯ ಸರ್ಕಾರವೇ ಕಾರಣವಾಗುತ್ತದೆ ಎಂದು ಕೋಟ ಎಚ್ಚರಿಸಿದರು. ಎಂದರು.
ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವುದರಿಂದ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ ಮುಖ್ಯ ಸಚೇತಕ ರವಿಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಲಘುವಾಗಿ ಮಾತನಾಡಿರುವುದು ಖಂಡನೀಯ. ಚೆಕ್ ಬೌನ್ಸ್ ಪ್ರಕರಣ ವೈಯಕ್ತಿಕ ಎಂದು ಸಚಿವ ಮಧು ಬಂಗಾರಪ್ಪ ಪ್ರತಿಪಾದಿಸುತ್ತಿದ್ದಾರೆ. ಆದರೆ, ಸಾರ್ವಜನಿಕ ಜೀವನದಲ್ಲಿರುವವರ ವ್ಯಕ್ತಿಯ ವೈಯಕ್ತಿಕ ವಿಚಾರಗಳು ಚರ್ಚೆಯಾಗುತ್ತವೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.