

ಕಲಬುರಗಿ: ಈಡಿಗ ಸಮಾಜದಲ್ಲಿನ ಬಡ ಮಕ್ಕಳ ಶಿಕ್ಷಣಕ್ಕೆ ಸಮಾಜದಲ್ಲಿನ ಸ್ಥಿತಿವಂತರೂ ಕೈಜೋಡಿಸಬೇಕು. ಉನ್ನತ ಶಿಕ್ಷಣ ದೊರಕಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್ ಹೇಳಿದರು.
ನಗರದಲ್ಲಿ ಜಿಲ್ಲಾ ಈಡಿಗ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನೂತನ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸೋಮವಾರ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ, ನೌಕರರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಈಡಿಗ ಸಮಾಜದ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು. ಆಗ ಮಾತ್ರ ಎಲ್ಲ ಕ್ಷೇತ್ರದಲ್ಲಿ ಪ್ರಗತಿ ಕಾಣಲು ಸಾಧ್ಯ ಎಂದು ಹೇಳಿದರು.
ಎಲ್ಲರ ಆಶೀರ್ವಾದದಿಂದ ವಿಧಾನ ಪರಿಷತ್ ಸದಸ್ಯನಾಗಿದ್ದು, ಸಮಾಜದ ಅಭಿವೃದ್ಧಿಗೆ, ಪ್ರಗತಿಗೆ ಸದಾ ಜತೆಗೆ ಇರುವುದಾಗಿ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ರಾಜಕುಮಾರ ಗುತ್ತೇದಾರ್, ಪ್ರಮುಖರಾದ ಶಶಿಧರರಾವ್ ಗುತ್ತೇದಾರ್, ಅಶೋಕ ಕಲಾಲ, ವಿಠಲರಾವ ಭಾವಗಿ, ನರಸಯ್ಯ ಗುತ್ತೇದಾರ್, ಚಂದ್ರಕಾAತ ರಾವೂರ, ಝರಣಯ್ಯ ಗುತ್ತೇದಾರ್, ರಾಮು ಕಲಾಲ್, ಬಸವಂತಕುಮಾರ ಗುತ್ತೇದಾರ್, ರವೀಂದ್ರ ಬೆಡಸೂರ, ರಾಘವೇಂದ್ರ ಗುತ್ತೇದಾರ್ ಇದ್ದರು.