

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಆಧುನಿಕ ಯುಗದಲ್ಲಿ ವ್ಯಕ್ತಿಯ ಪ್ರತಿಭೆ ಮತ್ತು ಕೌಶಲ್ಯಗಳ ಆಧಾರದ ಮೇಲೆ ಉದ್ಯೋಗಾವಕಾಶಗಳು ಸಿಗುತ್ತವೆ. ಅನ್ವಯಿಕತೆಯ ಜ್ಞಾನವು ಒಂದು ಕೌಶಲ್ಯವಾಗಿದೆ. ವಿದ್ಯಾರ್ಥಿಗಳು ವೈವಿಧ್ಯಮಯ ಕೌಶಲ್ಯಗಳನ್ನು ಸಂಪಾದಿಸಬೇಕು ಎಂದು ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಗಣಕ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಚನ್ನಪ್ಪ ಅಕ್ಕಿ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರ ಶಾಲಾ ವಲಯ ವಿಜ್ಞಾನ ವಸ್ತು ಪ್ರದರ್ಶನ ಸೈನ್ಸಿಯಾ ವೆನಾರಿ 5.0 ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಮತ್ತು ವರ್ತನೆಯ ಮೂಲಕ ವಿಶ್ವಾಸ ಗಳಿಸಬೇಕು. ಮಾನವನ ವರ್ತನೆಗಳು ಅವಕಾಶಗಳ ಬಾಗಿಲನ್ನು ತೆರೆಸುತ್ತವೆ. ಸಂವಹನ ಕೌಶಲ್ಯವು ಪ್ರಧಾನವಾಗಿ ಅವಶ್ಯಕವಿರುತ್ತದೆ. ಮಾತು ಮತ್ತು ಮನ ಒಂದಾಗಿದ್ದು, ಕೃತಿ ಒಳ್ಳೆಯದಾಗಿದ್ದರೆ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಬಹುದಾಗಿದೆ ಎಂದರು.
ವಿಧಾನಪರಿಷತ್‌ನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ,ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಸದುದ್ದೇಶದಿಂದ ಇಂತಹ ಕಾರ‌್ಯಕ್ರಮ ಆಯೋಜಿಸಲಾಗಿದೆ. ಪ್ರಪಂಚದಲ್ಲಿ ಅತೀ ಹೆಚ್ಚು ಯುವಕರನ್ನು ಹೊಂದಿರುವ ಭಾರತದ ಕಡೆಗೆ ವಿವಿಧ ರಾಷ್ಟ್ರಗಳು ನೋಡುತ್ತಿವೆ. ವೈಜ್ಞಾನಿಕತೆಗೆ ಇಂದು ಹೆಚ್ಚಿನ ಮಹತ್ವ ಬರುತ್ತಿದೆ. ಯುವ ವಿಜ್ಞಾಗಳಿಗೆ ಭಾರತ ಸರ್ಕಾರ ಪ್ರಾಶಸ್ತ್ಯ ನೀಡುತ್ತಿದೆ ಎಂದರು.
ನಿರಂತರ ಪರಿಶ್ರಮ ವ್ಯಕ್ತಿಯನ್ನು ಉತ್ತುಂಗಕ್ಕೆ ಏರಿಸುತ್ತದೆ. ಆರೋಗ್ಯ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಮಾತೃ ಭಾಷೆಯಲ್ಲಿ ಪ್ರಾವೀಣ್ಯತೆ ಇದ್ದರೆ, ವಿವಿಧ ರಂಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಕೃತಕ ಬುದ್ಧಿಮತ್ತೆಯ ಉಪಯೋಗ ಮಾಡಿಕೊಳ್ಳಬೇಕು. ವಿಜ್ಞಾನದ ವಿಕಾಸವು ಮಾನವ ವಿಕಾಸಕ್ಕೆ ಬಳಕೆಯಾಗಬೇಕು. ವಿಜ್ಞಾನವು ಮಾನವೀಯತೆ ಮತ್ತು ಮನುಷ್ಯತ್ವಕ್ಕೆ ಉಪಯೋಗವಾಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಧೆನೆಗೈದು, ಕಲಿತ ಸಂಸ್ಥೆ ಪರಿಸರವನ್ನು ಮರೆಯಬಾರದು. ಅತ್ಯುನ್ನತ ಸ್ಥಾನ ಪಡೆದು ಜನಪರ ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರಾಚಾರ್ಯಡಾ. ಜ್ಯೋತಿ ಎಸ್ ಕವಳೇಕರ ಮಾತನಾಡಿ, ನಿಸರ್ಗದ ಸವಾಲುಗಳನ್ನು ಎದುರಿಸುತ್ತಾ ಸ್ಪರ್ಧೆಯನ್ನು ಮಾಡಬೇಕು. ಇಂತಹ ಅರ್ಥಪೂರ್ಣವಾದ ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ವಿಶ್ವನಾಥ ಕಾಮಗೋಳ, ಉಪ ಪ್ರಾಚಾರ್ಯಡಾ. ಸಂದೀಪ ಜವಳಿ, ಸರೋಜಾ ಗಾಡಿ, ಆರುಶಿ ಪಾಟೀಲ ಇತರರಿದ್ದರು.