

ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇವರು ನಿರಂತರ 45 ವರ್ಷ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರ ಸವಿನೆನಪಿಗಾಗಿ ಡಿಸೆಂಬರ್ 14ರಂದು ನಗರದಲ್ಲಿ ಬಸವರಾಜ ಹೊರಟ್ಟಿ ಅಭಿಮಾನಿ ಬಳಗದ ವತಿಯಿಂದ ಅದ್ಧೂರಿ ಸತ್ಕಾರ ಸಮಾರಂಭ ಏರ್ಪಾಟಾಗಿದೆ.
ಈ ಕಾರ್ಯಕ್ರಮಕ್ಕೆ ರಾಷ್ಟ್ರ, ರಾಜ್ಯ ಮಟ್ಟದ ಅನೇಕ ಗಣ್ಯರು, ಮಹನೀಯರನ್ನು ಆಹ್ವಾನಿಸಲು ಅಭಿಮಾನಿ ಬಳಗ ನಿರ್ಣಯಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ ಅವರನ್ನು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲು ದೆಹಲಿಯಲ್ಲಿ ಬಳಗ ಆಹ್ವಾನ ನೀಡಿತು.
ಬಳಗದ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಅವರು ಲೋಕಸಭಾಧ್ಯಕ್ಷರಿಗೆ ಪುಷ್ಪಗುಚ್ಚ ನೀಡಿ ಆಹ್ವಾನಿಸಿದರು.
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.