

ಬೆಂಗಳೂರು: ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಚಟುವಟಿಕೆ ಗರಿಗೆದರಿದ್ದು, ರಾಜ್ಯದ ಮೂರು ಪ್ರಮುಖ ಪಕ್ಷಗಳಲ್ಲಿನ ನಾಯಕರು ಚುರುಕುಗೊಂಡಿದ್ದಾರೆ. ಮತ್ತೊಂದೆಡೆ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರ ವಿರುದ್ಧ ದೂರು ದಾಖಲಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತ ಎನ್ನಲಾದ ಪೊಲೀಸ್ ಸೂಪರಿಂಟೆಂಡೆಂಟ್ ಪುರುಷೋತ್ತಮ್ ಅವರ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಸ್. ರವಿ ದೂರು ನೀಡಿದ್ದಾರೆ. ಈ ಹಿಂದೆ ರಾಮನಗರದಲ್ಲಿ ಕಾರ್ಯನಿರ್ವಹಿಸಿದ್ದ ಪುರುಷೋತ್ತಮ್, ಪ್ರಸ್ತುತ ಬಳ್ಳಾರಿಯಲ್ಲಿ ಲೋಕಾಯಕ್ತ ಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೇ ಮತ ಚಲಾಯಿಸಬೇಕು ಎಂದು ಪಂಚಾಯತ್ ಸದಸ್ಯರಿಗೆ ಪುರುಷೋತ್ತಮ್ ಧಮ್ಕಿ ಹಾಕುತ್ತಿದ್ದಾರೆ ಎಂಬುದಾಗಿ ಮುಖ್ಯ ಚುನಾವಣಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಅವರಿಗೆ ರವಿ ದೂರು ನೀಡಿದ್ದಾರೆ.
ಮಾಜಿ ಸಿಎಂ ಎಚ್ಡಿಕೆ ಆಪ್ತರಾಗಿರುವ ಪುರುಷೋತ್ತಮ್ ಬಳ್ಳಾರಿಯಲ್ಲಿನ ತಮ್ಮ ಕರ್ತವ್ಯ ಬಿಟ್ಟು ಬಂದು ಇಲ್ಲಿ ಚುನಾವಣೆಗೆ ಪ್ರಚಾರ ಮಾಡುತ್ತಿದ್ದಾರೆ. ಮಾತ್ರವಲ್ಲ ಪಂಚಾಯ್ ಸದಸ್ಯರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿ ಬೆಂಗಳೂರಿನ ಲೋಕಾಯಕ್ತ ಕಚೇರಿಗೂ ದೂರು ನೀಡಿದ್ದಾರೆ.