ಕರಗಡ’ ಪೂರ್ಣಗೊಳಿಸಲು ಇಚ್ಛಾಶಕ್ತಿ ಕೊರತೆ

Published on

ಕಡೂರು: ಕರಗಡ ಯೋಜನೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಈಗ ಅಧಿಕಾರದಲ್ಲಿ ಇರುವವರಿಗೆ ಯೋಜನೆ ಪೂರ್ಣಗೊಳಿಸುವ ಇಚ್ಛಾಶಕ್ತಿ ಇಲ್ಲ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ದೂರಿದರು.

ತಾಲೂಕಿನ ನಿಡಘಟ್ಟದಲ್ಲಿ ಶುಕ್ರವಾರ ಗಾಂಧಿಜಿ ದೇವಾಲಯದ ಮುಂದೆ ಕರಗಡ ಕುಡಿಯುವ ನೀರಿನ ಹೋರಾಟ ಸಮಿತಿ, ಬಯಲುಸೀಮೆ ನೀರಾವರಿ ಹೋರಾಟ ಸಮಿತಿ, ದಾಸರಹಳ್ಳಿ ಮತ್ತು ಮಾದರಸನಕೆರೆ ನೀರಾವರಿ ಹೋರಾಟ ಸಮಿತಿಯಿಂದ ಏರ್ಪಡಿಸಿದ್ದ ರೈತರ ಕರಾಳ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರಗಡ ಯೋಜನೆ ಪರಿಪೂರ್ಣವಾದರೆ ಬಯಲುಸೀಮೆ ರೈತರ ಬದುಕು ಹಸನಾಗುತ್ತದೆ. ಯೋಜನೆಗಾಗಿ ನಡೆಸುತ್ತಿರುವ ನಮ್ಮ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಯೋಜನೆ ಶೀಘ್ರ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಜನಪ್ರತಿನಿಧಿಗಳು ಬಯಲುಸೀಮೆಗೆ ಶಾಶ್ವತ ನೀರಾವರಿ ಕಲ್ಪಿಸುತ್ತಾರೆಂಬ ಕನಸು ಹಾಗೆಯೇ ಉಳಿದಿರುವುದು ವಿಪರ್ಯಾಸ. ಪಕ್ಷಾತೀತವಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಎಸ್​ಪಿ ಬೆಂಬಲ ನೀಡಿರುವುದು ಹೆಚ್ಚಿನ ಬಲ ತಂದಿದೆ ಎಂದು ನೀರಾವರಿ ಹೋರಾಟ ಸಮಿತಿ ಸಂಚಾಲಕ ರವೀಶ್ ಬಸಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net