

ತುಮಕೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆಯಿತು.
ಜಿಲ್ಲೆಯಲ್ಲಿ ಒಟ್ಟಾರೆ ಶೇ.99.78 ದಾಖಲೆ ಮತದಾನವಾಗಿದೆ. 2015ರಲ್ಲಿ ನಡೆದಿದ್ದ ಚುನಾವಣೆಯಲ್ಲಿಯೂ ಶೇ.99.75 ಮತದಾನವಾಗಿತ್ತು.
ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆದಿದ್ದು 338 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ತುಮಕೂರು ಹಾಗೂ ಶಿರಾ ತಾಲೂಕಿನಲ್ಲಿ ಶೇ.100 ಮತದಾನವಾಗಿದೆ. ಇನ್ನುಳಿದಂತೆ ಪಾವಗಡ -99.83, ಕೊರಟಗೆರೆ-99.75, ಕುಣಿಗಲ್-99.62, ಚಿಕ್ಕನಾಯಕನಹಳ್ಳಿ-99.39, ತಿಪಟೂರು 99.77, ತುರುವೇಕೆರೆ 99.76, ಮಧುಗಿರಿ ಶೇ.99.84 ಹಾಗೂ ಗುಬ್ಬಿ ತಾಲೂಕಿನಲ್ಲಿ 99.68 ಮತದಾನ ದಾಖಲಾಗಿದೆ. ಯಾವುದೇ ಅನಕ್ಷರಸ್ಥರು ಮತದಾನಕ್ಕೆ ಸಹಾಯಕರ ನೆರವು ಪಡೆಯದಿರುವುದು ಈ ಚುನಾವಣೆಯಲ್ಲಿ ವಿಶೇಷ ಎನಿಸಿತು. ಜಿಲ್ಲೆಯಲ್ಲಿ ಪರಿಷತ್ ಚುನಾವಣೆಗೆ 5559 ಮತದಾರರು ಹಕ್ಕು ಹೊಂದಿದ್ದು, 5547 ಮಂದಿ ಹಕ್ಕು ಚಲಾಯಿಸಿದ್ದಾರೆ. 338 ಮತಕೇಂದ್ರಗಳನ್ನು ಸ್ಥಾಪಿಸಲಾಗಿತ್ತು, ಎಲ್ಲಿಯೂ ಯಾವುದೇ ದೋಷಗಳು ಕಂಡುಬರಲಿಲ್ಲ.
6 ಅಭ್ಯರ್ಥಿಗಳ ಭವಿಷ್ಯ: ಅಂತಿಮ ಕಣದಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಾದ ಜೆಡಿಎಸ್‌ನಿಂದ ಆರ್.ಅನಿಲ್‌ಕುಮಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಆರ್.ರಾಜೇಂದ್ರ ಹಾಗೂ ಭಾರತೀಯ ಜನತಾ ಪಕ್ಷದಿಂದ ಎನ್.ಲೋಕೇಶ್, ನೋಂದಾಯಿತ ರಾಜಕೀಯ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ಕೆ.ಎಸ್.ಗಜೇಂದ್ರಕುಮಾರ್ ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ನಿವೃತ್ತ ಇಂಜಿನಿಯರ್ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಆರ್.ಜಯರಾಮಯ್ಯ, ತುಮಕೂರಿನ ಆರ್.ಎ.ಪ್ರಕಾಶ್ ಹೀಗೆ ಒಟ್ಟು ಆರು ಜನರು ಕಣದಲ್ಲಿದ್ದು ಎಲ್ಲರ ಭವಿಷ್ಯ ಮತಪೆಟ್ಟಿಗೆ ಸೇರಿದೆ. ಸಂಜೆ 4ರ ಹೊತ್ತಿಗೆ ಮತದಾನ ಪೂರ್ಣಗೊಂಡಿತ್ತು. ಅಂತಿಮವಾಗಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದ ಪೈಪೋಟಿ ಏರ್ಪಟ್ಟಿದ್ದು ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆಂಬುದು ತೀವ್ರ ಕುತೂಹಲ ಹುಟ್ಟುಹಾಕಿದೆ. ಡಿ.14ರಂದು ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.
ಮಾಧುಸ್ವಾಮಿ, ನಾಗೇಶ್, ಪರಮೇಶ್ವರ ಮತದಾನ: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿಯಲ್ಲಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಪಟೂರಿನಲ್ಲಿ ಹಾಗೂ ಡಾ.ಜಿ.ಪರಮೇಶ್ವರ್ ಕೊರಟಗೆರೆಯಲ್ಲಿ ಮತದಾನ ಮಾಡಿದರು. ಆಯಾ ಕ್ಷೇತ್ರದ ಶಾಸಕರು ತಾಲೂಕು ಕೇಂದ್ರದಲ್ಲಿ ಮತದಾನ ಮಾಡಿದರು. ತುಮಕೂರು ಮಹಾನಗರ ಪಾಲಿಕೆಯಲ್ಲಿ ಮೇಯರ್, ಉಪಮೇಯರ್ ಸೇರಿ 35 ಪಾಲಿಕೆ ಸದಸ್ಯರು, ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ಬಿಎಂಎಲ್ ಕಾಂತರಾಜು ಹಾಗೂ ನಾಮನಿರ್ದೇಶಿತ 5 ಸದಸ್ಯರು ಸೇರಿ ಒಟ್ಟು 43 ಮತದಾರರು ಮತಚಲಾಯಿಸಿದರು. ಈ ಪೈಕಿ 17 ಮಹಿಳೆಯರಿದ್ದರು.
2, 3ನೇ ಪ್ರಾಶಸ್ತ್ಯದ ಮತಕ್ಕೂ ಡಿಮಾಂಡ್ : ಮತದಾರ ಇಷ್ಟಪಟ್ಟರೆ ಕಣದಲ್ಲಿದ್ದ ಆರು ಜನರಿಗೂ ಮತ ನೀಡಲು ಅವಕಾಶವಿತ್ತು, ಅಭ್ಯರ್ಥಿ ಹೆಸರು, ಭಾವಚಿತ್ರದ ಮುಂದೆ 1, 2, 3, 4, 5, 6 ಹೀಗೆ ಪ್ರಾಶಸ್ತ್ಯದ ಮತ ಹಾಕಲು ಅವಕಾಶವಿತ್ತು. ಈ ಬಗ್ಗೆ ಸಾಕಷ್ಟು ತರಬೇತಿ ನೀಡಿದ್ದರೂ ಮತದಾನ ಮಾಡುವಾಗ ಗೊತ್ತಾಗದೆ ಕೆಲವು ಸದಸ್ಯರು ಗೊಂದಲಕ್ಕೆ ಒಳಗಾಗಿದ್ದು ನಡೆಯಿತು. ಮತ ಎಣಿಕೆಯಲ್ಲಿ ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಶೇ.50 ಮತ ಯಾರಿಗೂ ಬರದಿದ್ದರೆ ಮಾತ್ರ 2ನೇ ಪ್ರಾಶಸ್ತ್ಯದ ಮತ ಎಣಿಕೆ. ಅಲ್ಲಿಯೂ ಬರದಿದ್ದರೇ ಮೂರನೇ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಯಲಿದೆ. ತುಮಕೂರು ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಗೆಲುವು ನಿರ್ಧಾರ ಕಷ್ಟಸಾಧ್ಯವಿದೆ ಹಾಗಾಗಿ, ಹಿಂದಿನ ಚುನಾವಣೆಗಿಂತಲೂ ಈ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತಗಳು ಹೆಚ್ಚು ಮಹತ್ವ ಪಡೆಯಲಿದ್ದು ರಾಜಕೀಯ ಪಕ್ಷದ ಕಾರ್ಯಕರ್ತರು ಪ್ರಾಶಸ್ತ್ಯದ ಮತಕ್ಕೆ ಹಿಂದೆ ಬಿದ್ದಿದ್ದರು.
ಗೆಲುವಿಗೆ ಬೇಕಿದೆ 2774 ಮತ: ಒಬ್ಬ ವ್ಯಕ್ತಿ, ಒಂದು ಮತ ಸೂತ್ರದಲ್ಲಿ ಮತದಾನಕ್ಕೆ ಅವಕಾಶವಿದ್ದು, ಮತದಾರ ಪ್ರಾಶಸ್ತ್ಯದ ಮೇಲೆ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಒಟ್ಟು ಚಲಾವಣೆಯಾದ ಮತದಲ್ಲಿ ಶೇ.50 ಮತ ಪಡೆದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ. ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಶೇ.50 ಮತಗಳನ್ನು ಪಡೆಯದಿದ್ದರೆ ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ಅನಿವಾರ್ಯವಾಗಲಿದೆ. ಹೀಗೆ.. ಗೆಲ್ಲುವ ಅಭ್ಯರ್ಥಿಗೆ ಶೇ.50 ಮತ ಬರುವವರೆಗೂ ಮತ ಎಣಿಕೆ ನಡೆಯುತ್ತಲೇ ಇರುತ್ತದೆ. ಜಿಲ್ಲೆಯಲ್ಲಿ 5547 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು ಗೆಲುವಿಗೆ ಅರ್ಧಕ್ಕಿಂತ ಹೆಚ್ಚು 2774 ಮತದ ಅಗತ್ಯವಿದೆ.
ಅಭ್ಯರ್ಥಿ ಹಣೆಬರಹ ನಿರ್ಧರಿಸಲಿರುವ ‘ಪ್ರಾಶಸ್ತ್ಯ’: ಜಿಲ್ಲೆಯಲ್ಲಿ ಈ ಬಾರಿ ಮೇಲ್ಮನೆ ಚುನಾವಣೆ ತೀವ್ರ ಕುತೂಹಲ ಹುಟ್ಟುಹಾಕಿದೆ. ಹತ್ತೂ ತಾಲೂಕಿಗಳಲ್ಲಿನ ಚಿತ್ರಣ ಒಂದೊಂದು ರೀತಿಯಿದ್ದು ಒಟ್ಟಾರೆ ಮತದಾರ ಪ್ರಭುಗಳ ಮನಸ್ಸು ತಿಳಿಯದೇ ಇರುವುದರಿಂದ ಫಲಿತಾಂಶ ಅಸ್ಪಷ್ಟವಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳಿಗೂ ಸಮಾನ ಅವಕಾಶವಿದ್ದಂತೆ ವಾತಾವರಣ ಕಾಣುತ್ತಿದೆ. ಯಾರೇ ಗೆದ್ದರೂ ಕೂದಲೆಳೆಯ ಅಂತರದ ಗೆಲುವಾಗಲಿದೆ. ಈ ಬಾರಿ ‘ಪ್ರಾಶಸ್ತ್ಯ’ದ ಮತದಲ್ಲಿ ಅಭ್ಯರ್ಥಿಯ ಹಣೆಬರಹ ನಿರ್ಧರವಾಗಲಿದೆ.
ಹಣದ ಹೊಳೆ ಹರಿಸಿರುವ ಅಭ್ಯರ್ಥಿಗಳು ‘ಮತದಾರ ಪ್ರಭುಗಳ’ನ್ನು ಹಿಡಿದಿಡಲು ಹರಸಾಹಸ ಪಟ್ಟಿದ್ದಾರೆ, ಮತ್ತೊಂದೆಡೆ ಮತದಾರರು ಪ್ರಾಶಸ್ತ್ಯ ಮತ ಇದೆಯೆಲ್ಲಾ. ಕೊಟ್ಟಷ್ಟು ಕೊಡಲಿ ಎಲ್ಲರಿಗೂ ವೋಟು ಹಾಕೋಣ ಅನ್ನುವ ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ. ಇದು ಅಭ್ಯರ್ಥಿಗಳ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿದೆ, ಚುನಾವಣೆಗೆ ಮುನ್ನಾದಿನ ಅಭ್ಯರ್ಥಿಗಳು ಚಾಪೆ ಕೆಳೆಗೆ ತೂರಿದರೆ ಮತದಾರರು ರಂಗೋಲಿ ಕೆಳಗೆ ತೂರಿದರು.