ವಿಧಾನ ಪರಿಷತ್ ಚುನಾವಣೆ: ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡರ ಸಭೆ

mlc election Congress leaders meet in Mysore
Published on

ಮೈಸೂರು: ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿವೇಕಾನಂದ ಅವರ ಗೆಲುವಿಗೆ ಕಾರ್ಯತಂತ್ರ ರೂಪಿಸಲು ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಜೆಡಿಎಸ್ ಮುಖಂಡರ ಸಭೆ ನಡೆಯಿತು.

ದಕ್ಷಿಣ ಶಿಕ್ಷಕರ ಕ್ಷೇತ್ರವು ಜೆಡಿಎಸ್‌ನ ಭದ್ರಕೋಟೆಯಾಗಿದ್ದು, ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಶಕ್ತಿಮೀರಿ ಶ್ರಮಿಸಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ, ಮಾಜಿ ಶಾಸಕ ಸಾ.ರಾ. ಮಹೇಶ್ ನಿರ್ದೇಶನ ನೀಡಿದರು.

ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸುವ ಉತ್ತಮ ವಾತಾವರಣ ಇದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಶಿಕ್ಷಕರಿಗೆ ನೀಡಿರುವ ಕೊಡುಗೆಯ ಕುರಿತು ಮತದಾರರಿಗೆ ತಿಳಿಸುವ ಕಾರ್ಯ ಮಾಡಬೇಕು. ನಗರ ಪಾಲಿಕೆಯ 65 ವಾರ್ಡ್‌ನ ಪಕ್ಷದ ಎಲ್ಲ ಮಾಜಿ ಸದಸ್ಯರು, ಮಾಜಿ ಮೇಯರ್‌ಗಳು, ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಮತದಾರರ ಮನೆ ಮನೆಗೆ ತೆರಳಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಬೇಕು ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಮೇಯರ್‌ಗಳಾದ ರವಿಕುಮಾರ್, ಆರ್. ಲಿಂಗಪ್ಪ, ನಗರ ಪಾಲಿಕೆ ಮಾಜಿ ಸದಸ್ಯೆ ಪ್ರೇಮಾ ಶಂಕರೇಗೌಡ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net