ಅಹಿಂದ ಮತಗಳ ಮೇಲೆ ಕೈ ಕಣ್ಣು ; ಬಿಜೆಪಿ-ಜೆಡಿಎಸ್ ಪೈಪೋಟಿಯ ಲಾಭಕ್ಕೆ ಯತ್ನ

12-klr-5
Published on

ಕೋಲಾರ: ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಅ.28ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಮೇಶ್ ಬಾಬು ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ಇರುವ ಪೈಪೋಟಿಯ ಲಾಭಕ್ಕೆ ಅಹಿಂದ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಜೆಡಿಎಸ್‌ನಿಂದ ಟಿಕೆಟ್ ಸಿಗದೆ ಕಾಂಗ್ರೆಸ್ಸಿಗೆ ಸೇರಿ ಸ್ಪರ್ಧಿಸಿರುವ ರಮೇಶ್ ಬಾಬು ಶೇ.60ಕ್ಕೂ ಹೆಚ್ಚಿನ ಪ್ರಮಾಣದಲ್ಲಿರುವ ಅಹಿಂದ ಮತಗಳ ಮೇಲೆ ಕಣ್ಣಿಟ್ಟು ಬಿರುಸಿನ ಪ್ರಚಾರ ನಡೆಸಿದ್ದಾರೆ. ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಕಳೆದ ಬಾರಿ 1.15 ಲಕ್ಷ ಮತಗಳಿತ್ತು. ಈ ಬಾರಿ 1.25 ಲಕ್ಷವಾಗುವ ನಿರೀಕ್ಷೆ ಇದೆ. ಒಟ್ಟು ಮತದಾರರಲ್ಲಿ ಮುಸ್ಲಿಂ, ಕ್ರೈಸ್ತರು ಹಾಗೂ ಹಿಂದುಳಿದ ವರ್ಗದ ಮತದಾರರ ಪೈಕಿ ಶೇ.75 ಮತಗಳು ತಮಗೇ ಸಿಗಲಿವೆ ಎಂದು ನಂಬಿರುವ ಅಭ್ಯರ್ಥಿ, ಬಿಜೆಪಿಯಲ್ಲಿನ ಬಂಡಾಯ ಮತ್ತು ಜೆಡಿಎಸ್ ವರಿಷ್ಠರು ನೀಡಿದ ಆಶ್ವಾಸನೆ ಈಡೇರಿಸಿಲ್ಲವೆಂಬ ವಿಷಯವನ್ನು ಟ್ರಂಪ್‌ಕಾರ್ಡ್ ಆಗಿ ಬಳಕೆ ಮಾಡಲು ಹೊರಟಿದ್ದಾರೆ.

ರಮೇಶ್‌ಬಾಬುಗೆ ಟಿಕೆಟ್ ನೀಡಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸಮ್ಮತಿಸಿದ್ದರಾದರೂ ಹಾಲಿ ಎಂಎಲ್‌ಸಿ ತೂಪಲ್ಲಿ ಆರ್.ಚೌಡರೆಡ್ಡಿಗೆ ಮತ್ತೊಂದು ಅವಕಾಶ ಕಲ್ಪಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮುನಿಸಿಕೊಂಡಿರುವವರು ಜೆಡಿಎಸ್ ವಿರುದ್ಧ ಮತ ಹಾಕಲಿದ್ದಾರೆ ಎಂದು ಹೆಸರು ಹೇಳಿಲಿಚ್ಛಿಸದ ಜೆಡಿಎಸ್ ಮುಖಂಡರೊಬ್ಬರು ತಿಳಿಸಿದ್ದಾರೆ.

ಚೌಡರೆಡ್ಡಿ ಗೆದ್ದ ಮೇಲೆ ಪದವೀಧರರ ಹಿತ ಕಾಪಾಡಲು ಹೋರಾಟ ಮಾಡಿಲ್ಲ, ಸ್ವಂತ ಜಿಲ್ಲೆಯಾದ ಕೋಲಾರದಲ್ಲೂ ಜೆಡಿಎಸ್‌ನ ಅನೇಕರು ಕೈಕೊಡುವ ಸಾಧ್ಯತೆಯಿದೆ, ಇನ್ನು ಬಿಜೆಪಿ ಅಭ್ಯರ್ಥಿಗೆ ಬಂಡಾಯಗಾರರು ಸಿಂಹಸ್ವಪ್ನರಾಗಿರುವುದರಿಂದ ರಮೇಶ್‌ಬಾಬುಗೆ ಲಾಭವಾಗಲಿದೆ ಎಂಬ ಲೆಕ್ಕಾಚಾರವಿದೆ.

ರಮೇಶ್‌ಬಾಬು ಮೊದಲ ಅವಧಿಯಲ್ಲಿ ಖಾಸಗಿ ಶಾಲೆಗಳಲ್ಲಿ ಸೈನ್ಸ್ ಲ್ಯಾಬ್, ಕಂಪ್ಯೂಟರ್ ವಿಭಾಗ ತೆರೆಯಲು ನೆರವು ಕಲ್ಪಿಸಿರುವುದರಿಂದ ಬಹುತೇಕ ಖಾಸಗಿ ಶಾಲೆಗಳಲ್ಲಿ ಪದವೀಧರ ಶಿಕ್ಷಕರಾಗಿರುವವರು ಕಾಂಗ್ರೆಸ್ ಬಗ್ಗೆ ಒಲವು ಇಲ್ಲದಿದ್ದರೂ ಅಭ್ಯರ್ಥಿ ಗುಣ, ವರ್ಚಸ್ಸು ನೋಡಿ ಮತ ನೀಡಬಹುದೆಂದು ಬೆಂಬಲಿಗರು ನಿರೀಕ್ಷಿಸಿದ್ದಾರೆ.

ರಮೇಶ್ ಬಾಬುಗೆ ಜೆಡಿಎಸ್ ವರಿಷ್ಠರು ಅನ್ಯಾಯವೆಸಗಿದ್ದಾರೆ, ಕಾಂಗ್ರೆಸ್ಸಿನ ಹಿರಿಯ ಶಾಸಕ ಕೆ.ಆರ್.ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಸೆ ಮೇರೆಗೆ ಕೈ ಅಭ್ಯರ್ಥಿ ಗೆಲುವಿಗೆ ಪ್ರಯತ್ನಿಸುತ್ತಿದ್ದಾರೆ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಮುಖಂಡರು ಪರೋಕ್ಷವಾಗಿ ಪ್ರಚಾರ ನಡೆಸುತ್ತಿರುವುದಲ್ಲದೆ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿ ಕೈ ಪ್ರಮುಖರು ಅಖಾಡಕ್ಕೆ ಇಳಿದಿದ್ದು, ರಮೇಶ್ ಬಾಬು ಅವರ ಅಹಿಂದ ಜಪ ಫಲಿಸುವುದೇ ನೋಡಬೇಕಿದೆ.

ಕೋಲಾರದಲ್ಲಿ ಉಲ್ಟಾ: ರಮೇಶ್‌ಬಾಬುಗೆ ಜೆಡಿಎಸ್‌ನಿಂದ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆಯಿಂದ ಸಂಘಟನೆಗೆ ಓಡಾಡಿದ್ದ ಜೆಡಿಎಸ್ ಹಿರಿಯ ಮುಖಂಡ ಮೂರಾಂಡಹಳ್ಳಿ ಗೋಪಾಲಪ್ಪ ಇನ್ನಿತರರು ರಮೇಶ್ ಬಾಬು ಕೈ ಅಭ್ಯರ್ಥಿ ಆಗುತ್ತಿದ್ದಂತೆ ಹಿಂದೆ ಸರಿದರೆ, ಕೋಲಾರದ ಕಾಡುಗುರು ಶಿಕ್ಷಣ ಸಂಸ್ಥೆ ಕಾರ್ಯದರ್ಶಿ, ಜೆಡಿಎಸ್ ಮುಖಂಡ ನಾಗಭೂಷಣ್ ಇತರರು ಜೆಡಿಎಸ್‌ಗೆ ಗುಡ್ ಬೈ ಹೇಳಿ ಕೈ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಕಳೆದ ಸಲ ರಮೇಶ್ ಬಾಬು ಗೆಲುವಿಗೆ ಶ್ರಮಿಸಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖಂಡ ಸದಾನಂದ ಸಹ ಕೈ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ.

ಗುಟ್ಟು ಬಿಟ್ಟುಕೊಡುತ್ತಿಲ್ಲ: ಬಿಜೆಪಿ ಮತ್ತು ಕೈ ಅಭ್ಯರ್ಥಿಗಳಿಬ್ಬರೂ ಒಂದೇ ಜಾತಿಯವರಾದ್ದರಿಂದ ಅಹಿಂದ ಮತದಾರರು ರಮೇಶ್ ಬಾಬು ಕೈ ಹಿಡಿಯಬಹುದೆಂದು ಬೆಂಬಲಿಗರು ನಂಬಿದ್ದಾರೆ. ಮತದಾರರು ಗುಟ್ಟು ಬಿಟ್ಟು ಕೊಡುತ್ತಿಲ್ಲ, ಬಿಜೆಪಿ, ಜೆಡಿಎಸ್‌ಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ, ಈವರೆಗೆ ಆಗ್ನೇಯ ಪದವೀಧರ ಕ್ಷೇತ್ರದಿಂದ ಕೈ ಅಭ್ಯರ್ಥಿ ಗೆದ್ದಿಲ್ಲ, ಅಹಿಂದ ಮತಗಳು ಛಿದ್ರವಾಗದಂತೆ ಮೂರೂ ಪಕ್ಷಗಳ ಅಭ್ಯರ್ಥಿಗಳು ಪ್ರಯತ್ನಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net