ಕರಾವಳಿಯಲ್ಲಿ ಮತ್ತೆ ಪರಿಷತ್ ಸಮರ

council
Published on



ಪಿ.ಬಿ.ಹರೀಶ್ ರೈ ಮಂಗಳೂರು

ಲೋಕಸಭೆ ಚುನಾವಣೆ, ವಿಧಾನ ಪರಿಷತ್ ನೈಋತ್ಯ ಪದವೀಧರ-ಶಿಕ್ಷಕರ ಕ್ಷೇತ್ರದ ಚುನಾವಣೆ ಬಳಿಕ ರಾಜಕೀಯ ಪಕ್ಷಗಳು, ಕರಾವಳಿಯಲ್ಲಿ ಈಗ ಇನ್ನೊಂದು ಸಮರಕ್ಕೆ ಅಣಿಯಾಗಬೇಕಾಗಿದೆ.
ದ.ಕ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಚುನಾಯಿತರಾದ ಕಾರಣ, ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ತೆರವಾದ ಸ್ಥಾನಕ್ಕೆ ಶೀಘ್ರ ಚುನಾವಣೆ ಘೋಷಣೆಯಾಗಲಿದೆ.
ಕೋಟ ಶ್ರೀನಿವಾಸ ಪೂಜಾರಿ ಪರಿಷತ್ ಸದಸ್ಯತ್ವ ಅವಧಿ 2028ರ ಜನವರಿ 5ರವರೆಗೆ ಇದೆ. ರಾಜ್ಯಸಭೆ ಹಾಗೂ ಪರಿಷತ್ ಸದಸ್ಯರ ರಾಜೀನಾಮೆ ಅಥವಾ ನಿಧನದಿಂದ ಸ್ಥಾನ ತೆರವಾಗುವ ಸಂದರ್ಭ ಅವರ ಸದಸ್ಯತ್ವದ ಅವಧಿ ಪೂರ್ಣಗೊಳ್ಳಲು ಒಂದು ವರ್ಷದ ಒಳಗಿದ್ದರೆ ಆ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ. ಆದರೆ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿ ಇದ್ದರೆ ಒಂದೆರಡು ತಿಂಗಳಲ್ಲೇ ಚುನಾವಣೆ ನಡೆಯುತ್ತದೆ. ಹೊಸದಾಗಿ ಆಯ್ಕೆಯಾಗುವವರು ಬಾಕಿ ಉಳಿದ ಅವಧಿಗೆ ಮಾತ್ರ ಸದಸ್ಯತ್ವ ಹೊಂದಿರುತ್ತಾರೆ.
*6 ಸಾವಿರ ಮಿಕ್ಕಿ ಮತದಾರರು: ದ.ಕ. ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯ ದ.ಕ. ಸ್ಥಳೀಯ ಸಂಸ್ಥೆಗಳ ಕ್ಷೇತ್ರ ದ್ವಿ ಸದಸ್ಯ ಕ್ಷೇತ್ರವಾಗಿದ್ದು, 2021ರ ಚುನಾವಣೆಯಲ್ಲಿ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್‌ನಿಂದ ಮಂಜುನಾಥ ಭಂಡಾರಿ ಪ್ರಥಮ ಪ್ರಾಶಸ್ತ್ಯದ ಮತದಲ್ಲೇ ಗೆಲುವು ಸಾಧಿಸಲು ಯಶಸ್ವಿಯಾಗಿದ್ದರು. ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸದ್ಯ 6 ಸಾವಿರ ಮತದಾರರಿದ್ದಾರೆ.
ಜಿಪಂ ಮತ್ತು ತಾಪಂ ಚುನಾವಣೆ ನಡೆಯದ ಕಾರಣ 200 ಮತದಾರರು ಕಡಿಮೆಯಾಗಿದ್ದಾರೆ. ಉಪ ಚುನಾವಣೆ ಒಂದೇ ಸ್ಥಾನಕ್ಕೆ ನಡೆಯುವ ಕಾರಣ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ನಡೆಯಲಿದೆ. ಸದಸ್ಯರ ಈಗಿನ ಬಲಾಬಲ ಪರಿಗಣಿಸಿದರೆ ಬಿಜೆಪಿಗೆ ಗೆಲುವಿನ ಸಾಧ್ಯತೆ ಹೆಚ್ಚಿದ್ದು, ಒಂದಷ್ಟು ಆಕಾಂಕ್ಷಿಗಳು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
*4 ಬಾರಿ ಆಯ್ಕೆಯಾದ ಕೋಟ:
ದ.ಕ. ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ 2003ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ ಮತ್ತು ಬ್ಲೇಸಿಯಸ್ ಡಿಸೋಜ ಗೆಲ್ಲುವ ಮೂಲಕ ಎರಡು ಸ್ಥಾನ ಕಾಂಗ್ರೆಸ್ ಪಾಲಾಗಿತ್ತು. ಬ್ಲೇಸಿಯಸ್ ಅವಧಿ ಪೂರ್ಣವಾಗುವ ಮೊದಲು ನಿಧನರಾದ ಕಾರಣ 2008ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಜಯ ಸಾಧಿಸಿ ಕೈವಶದಲ್ಲಿದ್ದ ಸ್ಥಾನ ಬಿಜೆಪಿ ಪಾಲಾಯಿತು. 2010ರಲ್ಲಿ ಕೋಟ ಮತ್ತು ಪ್ರತಾಪಚಂದ್ರ ಶೆಟ್ಟಿ ಅವಿರೋಧ ಆಯ್ಕೆಯಾದರೆ, 2015ರಲ್ಲಿ ಇವರಿಬ್ಬರು ಚುನಾಯಿತರಾಗಿ ಮೂರನೇ ಬಾರಿಗೆ ಆಯ್ಕೆಯಾದರು. 2021ರ ಚುನಾವಣೆಯಲ್ಲಿ ಕೋಟ 4ನೇ ಬಾರಿ ಚುನಾಯಿತರಾದರು.

2021ರಲ್ಲಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಮತ
ಕೋಟ ಶ್ರೀನಿವಾಸ ಪೂಜಾರಿ(ಬಿಜೆಪಿ)-3672
ಮಂಜುನಾಥ ಭಂಡಾರಿ(ಕಾಂಗ್ರೆಸ್)- 2079
ಶಾಫಿ ಕೆ.ಬೆಳ್ಳಾರೆ(ಎಸ್‌ಡಿಪಿಐ)- 204
ಅಸಿಂಧು- 56
ಒಟ್ಟು -6011

**ಕರಾವಳಿಯಲ್ಲಿ ಲೋಕಸಭೆ ಚುನಾವಣೆ, ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಪಾರಮ್ಯ ಮೆರೆದಿದೆ. ದ.ಕ. ಸ್ಥಳೀಯಾಡಳಿತ ಕ್ಷೇತ್ರದ ಉಭಯ ಜಿಲ್ಲೆಗಳಲ್ಲಿ ಬಿಜೆಪಿಯ ಚುನಾಯಿತ ಸದಸ್ಯರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಪರಿಷತ್ ಉಪ ಚುನಾವಣೆಯನ್ನು ನಿರಾಯಾಸವಾಗಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ.
ಉದಯ ಕುಮಾರ್ ಶೆಟ್ಟಿ
ಬಿಜೆಪಿ ವಿಭಾಗ ಪ್ರಭಾರಿ

**ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆದ ಬಳಿಕ ರಾಜಕೀಯ ಚಿತ್ರಣ ಸಾಕಷ್ಟು ಬದಲಾಗಿದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಪಡೆದಿದೆ. ಹಿಂದಿನ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದಿದ್ದೇವೆ. ಮುಂದಿನ ಉಪ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಗೆಲುವು ಸಾಧಿಸಲಿದೆ.
ಐವನ್ ಡಿಸೋಜ
ಪರಿಷತ್ ಸದಸ್ಯ, ಕಾಂಗ್ರೆಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net