

*ಪಿ.ಬಿ.ಹರೀಶ್ ರೈ
ಮಂಗಳೂರು : ವಿಧಾನ ಪರಿಷತ್‌ನ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದೆ. ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟಕ್ಕೆ ಇದು ಪ್ರತಿಷ್ಠೆಯ ಕಣವಾಗಿದ್ದು ಸಚಿವರು, ಶಾಸಕರು ಪ್ರಚಾರಕ್ಕೆ ಇಳಿದಿದ್ದಾರೆ. ಬಂಡಾಯ
ಅಭ್ಯರ್ಥಿಗಳ ಸ್ಪರ್ಧೆ ಆಡಳಿತ ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿಗಳಿಗೆ ಸವಾಲಾಗಿ ಪರಿಣಮಿಸಿದೆ.
ದಕ್ಷಿಣ ಕನ್ನಡ , ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲೂಕುಗಳ ವ್ಯಾಪ್ತಿಯ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ. ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಡಿ.ಎಚ್.ಶಂಕರಮೂರ್ತಿ ಅವರು ಸತತ 5 ಬಾರಿ ಜಯ ಸಾಧಿಸಿದ್ದರು. ಕಳೆದ ಬಾರಿ ಬಿಜೆಪಿಯಿಂದ ಗೆದ್ದ
ಆಯನೂರು ಮಂಜುನಾಥ್ ಈಗ ಪಕ್ಷ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
* ಬಂಡಾಯದ ಕಹಳೆ :
ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಿವಮೊಗ್ಗದ ಎಸ್.ಪಿ.ದಿನೇಶ್ ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಆಯನೂರು ಮಂಜುನಾಥ್ ಅವರಿಗೆ ಮಣೆ ಹಾಕಿದೆ. ಪಕ್ಷಾಂತರ ಮಾಡಿದ ವ್ಯಕ್ತಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ
ಎಸ್.ಪಿ.ದಿನೇಶ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಬಿಜೆಪಿಯಿಂದ ಶಿವಮೊಗ್ಗದ ಜನಪ್ರಿಯ ವೈದ್ಯ ಡಾ.ಧನಂಜಯ ಸರ್ಜಿ ಸ್ಪರ್ಧೆಗೆ ಅವಕಾಶ ಪಡೆದಿದ್ದಾರೆ. ಇದನ್ನು ವಿರೋಧಿಸಿರುವ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭ ಪರಿಷತ್ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ ಬಿಜೆಪಿ ನಾಯಕರು ಈಗ ವಂಚನೆ ಮಾಡಿದ್ದಾರೆ ಎನ್ನುವುದು ರಘುಪತಿ ಭಟ್ ಅವರ ಆರೋಪವಾಗಿದೆ.
* ಗೆಲುವಿನ ಹಾದಿ ಕಠಿಣ
ಪದವೀಧರ ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಂಡಾಯ ಅಭ್ಯರ್ಥಿಗಳು ಜಯ ಸಾಧಿಸುವುದು ಕಷ್ಟ. ಆದರೆ ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ಗೆಲುವಿನ ಹಾದಿ ಕಠಿಣವಾಗಿದೆ. ಬಂಡಾಯ ಅಭ್ಯರ್ಥಿಗಳು ಪಡೆಯುವ ಪ್ರಥಮ ಪ್ರಾಶಸ್ತ್ಯದ ಮತಗಳು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎನ್ನುವ ಲೆಕ್ಕಾಚಾರ ರಾಜಕೀಯ ವಲಯದಲ್ಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲೆಯವರಾದ ಕಾರಣ ಆ ಜಿಲ್ಲೆಯಲ್ಲಿ ಅತೀ ಹೆಚ್ಚು 27,412 ಪದವೀಧರ ಮತದಾರರ ನೋಂದಣಿಯಾಗಿದೆ.
*ಮೈತ್ರಿಯಿಂದ ನಿರಾಸೆ
ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 1994 ಮತ್ತು 2000 ಚುನಾವಣೆಯಲ್ಲಿ ಬಿಜೆಪಿಯ ಕೆ.ಬಾಲಕೃಷ್ಣ ಭಟ್ ಹಾಗೂ 2006 ಮತ್ತು 2012ರ ಚುನಾವಣೆಯಲ್ಲಿ ಬಿಜೆಪಿಯ ಕ್ಯಾ.ಗಣೇಶ್ ಕಾರ್ಣಿಕ್ ಜಯಭೇರಿ ಬಾರಿಸಿದ್ದರು. ಆದರೆ 2018ರ ಚುನಾವಣೆಯಲ್ಲಿ ಕ್ಷೇತ್ರ ಬಿಜೆಪಿಯ ಕೈ ತಪ್ಪಿತು. ಕಾರ್ಣಿಕ್ ವಿರುದ್ಧ ಜೆಡಿಎಸ್‌ನ ಎಸ್.ಎಲ್.ಭೋಜೇ ಗೌಡ ಜಯ ಸಾಧಿಸಿದರು. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ
ಅಭ್ಯರ್ಥಿಯಾಗಿ ಎಸ್.ಎಲ್.ಭೋಜೇ ಗೌಡ ಅವರು ಅವಕಾಶ ಪಡೆದಿದ್ದಾರೆ. ಮೈತ್ರಿಯಿಂದಾಗಿ ಬಿಜೆಪಿ ಪಾಳಯದ ಆಕಾಂಕ್ಷಿಗಳು ನಿರಾಸೆ ಹೊಂದುವಂತಾಗಿದೆ.
* ಶಿಕ್ಷಕರ ಕ್ಷೇತ್ರದಲ್ಲೂ ಬಂಡಾಯ
ಕಾಂಗ್ರೆಸ್‌ನಿಂದ ಕೊಡಗಿನ ಡಾ.ಕೆ.ಕೆ.ಮಂಜುನಾಥ್ ಕುಮಾರ್ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಲು ವರ್ಷದಿಂದ ಸಿದ್ಧತೆ ನಡೆಸಿದ್ದ ಚಿಕ್ಕಮಗಳೂರಿನ ನಂಜೇಶ್ ಬೆನ್ನೂರ್ ಅವರು ಇದರಿಂದ ತೀವ್ರ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕೊಡಗಿನ ಕೆ.ಕೆ.ಮಂಜುನಾಥ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗೂ ಅದೇ ಹೆಸರು ಇರುವ ಕಾರಣ ಗೊಂದಲಕ್ಕೆ ಕಾರಣವಾಗಬಹುದು ಎನ್ನಲಾಗಿದೆ. ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಮೇಲ್ನೋಟಕ್ಕೆ ಕಂಡು ಬಂದರೂ ಒಳಗೆ ಸಣ್ಣಪುಟ್ಟ ಅಸಮಾಧಾನಗಳಿವೆ. ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಮಂಗಳೂರಿನ ಡಾ.ಎಸ್.ಆರ್.ಹರೀಶ್ ಆಚಾರ್ಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತಿರುವುದು ಇದಕ್ಕೆ ನಿದರ್ಶನ.
ನೈಋತ್ಯ ಪದವೀಧರ ಕ್ಷೇತ್ರ : ಒಟ್ಟು ಮತದಾರರು- 85,090, ಒಟ್ಟು ಅಭ್ಯರ್ಥಿಗಳು-10.
ನೈಋತ್ಯ ಶಿಕ್ಷಕರ ಕ್ಷೇತ್ರ : ಒಟ್ಟು ಮತದಾರರು-23,402, ಒಟ್ಟು ಅಭ್ಯರ್ಥಿಗಳು-8