

*ಗೆಲುವಿನ ಲಯಕ್ಕೆ ಮರಳದ ಬಿಜೆಪಿ
*ಸತತ 2ನೇ ಬಾರಿ ಸೋಲು ಕಂಡ ರಘು ಕೌಟಿಲ್ಯ
ಸದೇಶ್ ಕಾರ್ಮಾಡ್ ಮೈಸೂರು
‘ಮೊದಲನೇ ಪ್ರಾಶಸ್ತ್ಯ ಮತ ಎಂಬುದು ಹಡಗು ಇದ್ದಂತೆ. ಎರಡನೇ ಪ್ರಾಶಸ್ತ್ಯ ಮತ ತೆಪ್ಪ ಇದ್ದಂತೆ. ಹಡಗಿನಲ್ಲಿ ಪ್ರಯಾಣಿಸಿದರೆ ಸುಲಭವಾಗಿ ಗೆಲುವಿನ ದಡ ಸೇರಬಹುದು. ಹಾಗಾಗಿ ಹಡಗಿನಿಂದ ತೆಪ್ಪಕ್ಕೆ ಬಿದ್ದರೆ ಗೆಲುವಿನ ದಡ ಸೇರಬಹುದು, ಸೇರದೆ ಇರಲೂ ಬಹುದು. ದಯವಿಟ್ಟು ತೆಪ್ಪಕ್ಕೆ ತಳ್ಳಬೇಡಿ…!
ಇದು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆರ್. ರಘು ಕೌಟಿಲ್ಯ ಚುನಾವಣಾ ಪ್ರಚಾರ ಸಂದರ್ಭ ಮತದಾರರ ಬಳಿ ಮಾಡಿಕೊಂಡ ಮನವಿ. ರಘು ಕೌಟಿಲ್ಯ ಅವರ ಮನವಿಗೆ ಓಗುಡದ ಮತದಾರರು ಕೊನೆಗೂ ಅವರನ್ನು ಹಡಗಿನಿಂದ ತೆಪ್ಪಕ್ಕೆ ತಳ್ಳಿದ್ದಾರೆ. ಅಂತಿಮವಾಗಿ ದ್ವಿತೀಯ ಪ್ರಾಶಸ್ತ್ಯ ಮತದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡ ಅವರ ಎದುರು ರಘು ಕೌಟಿಲ್ಯ ಕೆಲವೇ ಕೆಲವು ಮತಗಳ ಅಂತರದಲ್ಲಿ ಸೋಲು ಕಂಡರು. ಕಾಂಗ್ರೆಸ್ ಅಭ್ಯರ್ತಿ ಡಿ. ತಿಮ್ಮಯ್ಯ ಹಡಗಿನಲ್ಲಿ ಪ್ರಯಾಣಿಸಿ (ಮೊದಲ ಪ್ರಾಶಸ್ತ್ಯ) ಗೆಲುವಿನ ದಡ ಸೇರಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನಲ್ಲಿ ಮತ್ತೆ ಗೆಲುವಿನ ಲಯಕ್ಕೆ ಮರಳಬೇಕು ಎಂಬುದು ಬಿಜೆಪಿಯ ಕನಸಾಗಿತ್ತು. ಆದರೆ, ರಘು ಕೌಟಿಲ್ಯ ಅವರ ಸೋಲಿನೊಂದಿಗೆ ಈ ಕನಸು ಭಗ್ನಗೊಂಡಿದೆ. ಬಿಜೆಪಿಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಭದ್ರವಾದ ನೆಲೆ ಇಲ್ಲ. ‘ಸಂಘಟನೆಯ ದೃಷ್ಟಿಯಿಂದ ನಾವು ಈ ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್‌ಗಿಂತ ಎರಡು ಹೆಜ್ಜೆ ಹಿಂದೆಯೇ ಇದ್ದೇವೆ’ ಎಂದು ಸ್ವತಃ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಮೈಸೂರಿನಲ್ಲಿ ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಸಂಘಟನೆ ದೃಷ್ಟಿಯಿಂದ ಹಿಡಿತ ಸಾಧಿಸಬೇಕು ಎಂಬ ಬಿಜೆಪಿ ಕನಸು ನನಸಾಗಲಿಲ್ಲ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ ಕಡಿಮೆ. ಆದರೂ ಬಿಜೆಪಿ ಗೆ ಈ ಬಾರಿ ಗೆಲ್ಲುವ ವಿಶ್ವಾಸ ಇತ್ತು. ಅದಕ್ಕೆ ಕಾರಣ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಆರ್. ರಘು ಕೌಟಿಲ್ಯ ಪಡೆದ ಮತಗಳು..! ಕಳೆದ ಬಾರಿ ಮೊದಲ ಪ್ರಾಶಸ್ತ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ಧರ್ಮಸೇನ ಗೆಲುವು ಸಾಧಿಸಿದ್ದರು. ಆದರೆ, ರಘು ಕೌಟಿಲ್ಯ ಎದುರು ಜೆಡಿಎಸ್ ಅಭ್ಯರ್ಥಿ ಸಂದೇಶ್ ನಾಗರಾಜ್ ದ್ವಿತೀಯ ಪ್ರಾಶಸ್ತ್ಯ ಮತದಲ್ಲಿ ಗೆಲುವು ಸಾಧಿಸಲು ಸಾಕಷ್ಟು ಪ್ರಯಾಸ ಪಡಬೇಕಾಯಿತು.
ಆ ಸಂದರ್ಭ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ರಘು ಕೌಟಿಲ್ಯ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಹಾಗಾಗಿ ಈ ಬಾರಿಯ ಚುನಾವಣೆಯಲ್ಲೂ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ರಘು ಕೌಟಿಲ್ಯ ಅವರು ಗೆಲ್ಲುವ ವಿಶ್ವಾಸ ಹೊಂದಿದ್ದರು.
ರಘು ಕೌಟಿಲ್ಯ ಈ ಬಾರಿ ಗೆದ್ದೇ ಗೆಲ್ಲುತ್ತಾರೆ ಎಂಬ ಭರವಸೆ ಬಿಜೆಪಿಯ ಬಹುಪಾಲು ನಾಯಕರಲ್ಲಿ ಇತ್ತು. ಈ ಕಾರಣಕ್ಕೆ ಅಧಿಕೃತ ಫಲಿತಾಂಶ ಹೊರ ಬೀಳುವ ಮುನ್ನವೇ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಿಸಿದರು. ಕಾರ್ಯಕರ್ತರುಗಳ ಫೇಸ್‌ಬುಕ್, ವಾಟ್ಸ್ ಅ್ಯಪ್ ಸ್ಟೇಟಸ್‌ಗಳಲ್ಲಿ ‘ಆರ್. ರಘು ಕೌಟಿಲ್ಯ ಗೆಲುವು’ ರಾರಾಜಿಸುತಿತ್ತು. ಆದರೆ, ಅಂತಿಮ ಫಲಿತಾಂಶ ಹೊರ ಬಿದ್ದ ಸಂದರ್ಭ ಜೆಡಿಎಸ್‌ನ ಸಿ.ಎನ್. ಮಂಜೇಗೌಡ ಗೆಲುವಿನ ನಗೆ ಬೀರಿದರು.
ಉತ್ಸಹ ಇತ್ತು, ಮತಗಳು ಇರಲಿಲ್ಲ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಅತಿಯಾದ ಉತ್ಸಾಹ ಕಂಡು ಬಂತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಗಟಾನುಘಟಿ ನಾಯಕರು ಅಬ್ಬರದ ಚುನಾವಣಾ ಪ್ರಚಾರ ನಡೆಸಿದರು. ಆದರೆ, ಬಿಜೆಪಿಗೆ ಎರಡೂ ಜಿಲ್ಲೆಗಳಲ್ಲೂ ಮತಗಳ ಕೊರತೆ ದೊಡ್ಡ ಪ್ರಮಾಣದಲ್ಲಿಯೇ ಇತ್ತು. ಬಿಜೆಪಿಯವರು ನಂಬಿಕೊಂಡು ಇದ್ದದ್ದು ಕಾಂಗ್ರೆಸ್, ಜೆಡಿಎಸ್ ಬೆಂಬಲಿತ ಸದಸ್ಯರ ಮತಗಳನ್ನು. ಆದರೆ, ಬಿಜೆಪಿ ನಿರೀಕ್ಷೆ ಮಾಡಿದಷ್ಟು ಬೇರೆ ಪಕ್ಷಗಳ ಬೆಂಬಲಿತರ ಮತಗಳು ಬರಲೇ ಇಲ್ಲ. ಈ ಬಾರಿಯೂ ರಘು ಕೌಟಿಲ್ಯ ಗೆಲುವಿನ ದಡಕ್ಕೆ ಬಂದು ಸೋಲು ಅನುಭವಿಸಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದೆ ಇರುವುದು ಬಿಜೆಪಿಯ ಸೋಲಿಗೆ ಒಂದು ಕಾರಣ. ಇದರ ಜತೆಗೆ ರಘು ಕೌಟಿಲ್ಯ ಅತ್ಯಂತ ಸಣ್ಣ ಕೋಮಿಗೆ ಸೇರಿದವರಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮತಗಳನ್ನು ಸುಲಭವಾಗಿ ಸೆಳೆಯಲು ಸಾಧ್ಯವಾಗಲಿಲ್ಲ.
ಜೆಡಿಎಸ್‌ನೊಂದಿಗೆ ಮುನಿಸಿಕೊಂಡ ಶಾಸಕ ಜಿ.ಟಿ. ದೇವೇಗೌಡ ಹಾಗೂ ಅವರ ಬೆಂಬಲಿಗರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ. ತಿಮ್ಮಯ್ಯ ಅವರನ್ನು ಬೆಂಬಲಿಸಿದರು. ಇದರ ಜತೆಗೆ ದ್ವಿತೀಯ ಪ್ರಾಶಸ್ತ್ಯ ಮತವನ್ನು ಬಿಜೆಪಿ ಅಭ್ಯರ್ಥಿಗೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಜೆಡಿಎಸ್ ಮತಗಳು ಬಿಜೆಪಿಯ ಪಾಲಾಗಲಿಲ್ಲ ಎಂಬ ಮಾತುಗಳು ಇದೀಗ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.