ರಸ್ತೆಗಳ ದುರಸ್ತಿಗೆ ಕೊಟ್ಟಿದ್ದು 11.61 ಕೋಟಿ ರೂ. ಮಾತ್ರ: ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಬೇಸರ

22_12_Mdy_01(Mlc Dinesh Gooligowda)
Published on

ಮಂಡ್ಯ: ಜಿಲ್ಲೆಯಲ್ಲಿ ಮಳೆಯಿಂದಾಗಿ 81.85 ಕೋಟಿ ರೂ.ನಷ್ಟು ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆ ಹಾನಿಯಾಗಿದೆ. ಆದರೆ, ರಾಜ್ಯ ಸರ್ಕಾರ ಕೇವಲ 11.61 ಕೋಟಿ ರೂ. ಮಂಜೂರು ಮಾಡಿದೆ ಎಂದು ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಬೇಸರವ್ಯಕ್ತಪಡಿಸಿದ್ದಾರೆ.

ಭಾರಿ ಮಳೆಯಿಂದಾಗಿ ರಸ್ತೆಗಳು ಹಾಳಾಗಿರುವುದು ಹಾಗೂ ಅದಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು, ಬಿಡುಗಡೆ ಮಾಡಿರುವ ಅನುದಾನದ ಬಗ್ಗೆ ಕೇಳಿರುವ ಪ್ರಶ್ನೆಗೆ ಅಧಿವೇಶನದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ನೀಡಿರುವ ಉತ್ತರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಎಂಎಲ್‌ಸಿ, ಜಿಲ್ಲೆಗೆ ನೀಡಲಾಗಿರುವ ಅನುದಾನ ಸಮರ್ಪಕವಾಗಿಲ್ಲ. ರಾಜ್ಯ ಹೆದ್ದಾರಿ ದುರಸ್ತಿಗೆ 17.50 ಕೋಟಿ ರೂ., ಜಿಲ್ಲಾ ರಸ್ತೆಗಳಿಗೆ 64.35 ಕೋಟಿ ರೂ.ನೀಡಬೇಕೆಂದು ಜಿಲ್ಲಾಡಳಿತದ ಬೇಡಿಕೆಯಾಗಿತ್ತು. ಆದರೆ ರಾಜ್ಯ ಹೆದ್ದಾರಿಗೆ 4.80 ಕೋಟಿ ರೂ. ಹಾಗೂ ಜಿಲ್ಲಾ ರಸ್ತೆಗಳಿಗೆ 6.81 ಕೋಟಿ ರೂ.ಗಳಷ್ಟೇ ಬಿಡುಗಡೆ ಮಾಡಲಾಗಿದೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಎಂದು ಟೀಕಿಸಿದ್ದಾರೆ.

ಜಿಲ್ಲೆಯಲ್ಲಿ 17 ರಾಜ್ಯ ಹೆದ್ದಾರಿ ಹಾಗೂ 66 ಜಿಲ್ಲಾ ಮುಖ್ಯರಸ್ತೆಗಳು ಹಾನಿಗೊಳಗಾಗಿವೆ. ಕೆರೆ ಏರಿ ಒಡೆದು ನಿಡಘಟ್ಟ-ಮೈಸೂರು ಭಾಗದ ಸುಮಾರು 1.99 ಕಿಮೀ ರಸ್ತೆ ಹಾಳಾಗಿದೆ. ರಾಷ್ಟ್ರೀಯ ಹೆದ್ದಾರಿ ವಲಯಕ್ಕೆ ಸಂಬಂಧಿಸಿದಂತೆ ನಾಗಮಂಗಲ ತಾಲೂಕು ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-150ಎ ಸರಪಳಿ 539.100 ರಿಂದ 540.200 ಮತ್ತು 540.900 ರಿಂದ 541.05 ಕಿಮೀವರೆಗೆ ರಸ್ತೆಯ ಹಾಳಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಅಂತೆಯೇ ಜಿಲ್ಲಾ ಮುಖ್ಯ ರಸ್ತೆ ನಿರ್ವಹಣೆಯಡಿ 30 ಕಾಮಗಾರಿಗೆ 203.40 ಲಕ್ಷ ರೂ., ರಾಜ್ಯ ಹೆದ್ದಾರಿ ನಿರ್ವಹಣೆಯಡಿ 166 ಲಕ್ಷ ರೂ.ಮೊತ್ತದ 9 ಕಾಮಗಾರಿ ಅನುಮೋದನೆಗೊಂಡಿದೆ. ರಾಜ್ಯ ಹೆದ್ದಾರಿ ನಿರ್ವಹಣೆಯಡಿ 22.30 ಲಕ್ಷ ರೂ.ಮೊತ್ತದ 7 ಕಾಮಗಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆ ನಿರ್ವಹಣೆಯಡಿ 45.33 ಲಕ್ಷ ರೂ. ಮೊತ್ತದ 28 ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಂಡಿಗಳನ್ನು ಮುಚ್ಚಲು 50 ಲಕ್ಷ ರೂ.ಅನುದಾನ ಕೋರಲಾಗಿದೆ. ಆದಾಗ್ಯೂ ರಸ್ತೆ ಗುಂಡಿಗಳನ್ನು ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಕ್ರಮವಹಿಸಲಾಗಿದೆ ಎನ್ನುವ ಉತ್ತರ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net