ಹಸಿರೆಲೆ ಬೀಜಕ್ಕೆ ಸಬ್ಸಿಡಿ ಕೊಡಿ: ಎಂಎಲ್‌ಸಿ ದಿನೇಶ್ ಗೂಳಿಗೌಡ ಮನವಿ

1 (2)
Published on

ಮಂಡ್ಯ: ಮಣ್ಣಿನ ಫಲವತ್ತತೆ ಹೆಚ್ಚಿಸುವ ಹಸಿರೆಲೆ ಬೀಜ(ಚಂಬೆ ಬೀಜ)ವನ್ನು ರೈತರಿಗೆ ಸಬ್ಸಿಡಿ ದರದಲ್ಲಿ ವಿತರಣೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕೃಷಿ ಇಲಾಖೆ ಆಯುಕ್ತರಿಗೆ ಪತ್ರ ಬರೆದಿರುವ ಎಂಎಲ್‌ಸಿ, ಮಂಡ್ಯ ಜಿಲ್ಲೆಯಲ್ಲಿ ಭತ್ತ ಪ್ರಧಾನ ಬೆಳೆ. ಈ ಬೆಳೆಯನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಜಿಲ್ಲೆಯ ಏಳು ತಾಲೂಕಿನಲ್ಲಿ 65,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. ಈ ಪ್ರದೇಶದಲ್ಲಿ ಭತ್ತ ನಾಟಿಗೂ ಮೊದಲು ಹಸಿರೆಲೆ ಬೀಜವನ್ನು ಬಿತ್ತನೆ ಮಾಡಲಾಗುತ್ತದೆ. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಳ ಮಾಡುವ ಗುಣವನ್ನು ಹೊಂದಿದೆ. ಆದ್ದರಿಂದ ರೈತರಿಗೆ ಅತ್ಯಂತ ಅವಶ್ಯಕವಾಗಿದೆ. ಈ ಮೂಲಕ ತಮ್ಮ ಬೆಳೆಯ ಇಳುವರಿಯನ್ನು ಹೆಚ್ಚಳ ಮಾಡಿಕೊಳ್ಳಲು ಇದು ಸಹಾಯಕವಾಗಿದೆ ಎಂದು ವಿವರಿಸಿದ್ದಾರೆ.

ಇನ್ನು ಬಹುಮುಖ್ಯವಾಗಿ ಹೇಳಬೇಕೆಂದರೆ ಈಗ ಕೃಷಿಗೆ ರಾಸಾಯನಿಕಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಹೆಚ್ಚಿನ ಇಳುವರಿ ಬೇಕು ಎಂಬ ನಿಟ್ಟಿನಲ್ಲಿ ಹೆಚ್ಚೆಚ್ಚು ರಾಸಾಯನಿಕಗಳನ್ನು ಬಳಸಿ ಹಲವು ಕಡೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಮೊದಲಿಗೆ ಇವುಗಳಿಂದ ಉತ್ತಮ ಇಳುವರಿ ಬಂದರೂ ಅತಿಯಾದ ಬಳಕೆಯಿಂದ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಅಲ್ಲದೆ, ಆಹಾರವೂ ವಿಷಮಯವಾಗುತ್ತದೆ. ಆದರೆ, ನಮ್ಮ ಭಾಗದ ರೈತರು ರಾಸಾಯನಿಕ ಮುಕ್ತ ಬೆಳೆ ಬೆಳೆಯುತ್ತಿರುವುದು ನಮಗೆ ಹೆಮ್ಮೆಯೇ ಸರಿ. ಈ ನಿಟ್ಟಿನಲ್ಲಿ ಚಂಬೆ ಎಲೆಯನ್ನು ಬಳಸಿ ಈ ಭಾಗದಲ್ಲಿ ಕೃಷಿ ಮಾಡಲಾಗುತ್ತಿದೆ. ಚಂಬೆ ಎಲೆಯನ್ನು ನಾಟಿಗೂ ಮುನ್ನ ಗದ್ದೆಯಲ್ಲಿ ಹೂಳುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೇ, ಇಳುವರಿಯೂ ಅಧಿಕವಾಗುತ್ತದೆ ಎಂದು ಹೇಳಿದ್ದಾರೆ.

ಈಗ ಮಂಡ್ಯ ಜಿಲ್ಲೆಯಲ್ಲಿ ಹಸಿರೆಲೆ ಬೀಜದ ಕೊರತೆ ಇದೆ. ಇದು ರೈತರಿಗೆ ಅತ್ಯವಶ್ಯಕವಾಗಿದ್ದು, ಸುಮಾರು ಎರಡೂವರೆ ಸಾವಿರ ಕ್ವಿಂಟಾಲ್‌ನಷ್ಟು ಈ ಹಸಿರೆಲೆ ಬೀಜದ ಅಗತ್ಯತೆ ಇದೆ. ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಮಾಡುವುದರಿಂದ ಯೂರಿಯಾ ಗೊಬ್ಬರ ಬಳಕೆಯನ್ನು ತಪ್ಪಿಸಬಹುದು ಇಲ್ಲವೇ ತಗ್ಗಿಸಬಹುದಾಗಿದೆ. ಆದ್ದರಿಂದ ಈ ಬಗ್ಗೆ ಕ್ರಮ ವಹಿಸಬೇಕಿದೆ. ಒಂದು ಕೆಜಿಗೆ 60 ರೂಪಾಯಿ ಇದ್ದು, 30 ರೂ ಸಬ್ಸಿಡಿ ದರದಲ್ಲಿ ಕೊಡಿಸಲು ಸರ್ಕಾರ ತುರ್ತಾಗಿ ಕ್ರಮ ವಹಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಜೂನ್ ತಿಂಗಳಿಗೆ ಒಂದು ವಾರವಷ್ಟೇ ಬಾಕಿ ಇದ್ದು, ರೈತರು ಕೃಷಿ ಚಟುವಟಿಕೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ತುರ್ತು ಕ್ರಮ ವಹಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಪತ್ರದಲ್ಲಿ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net