

ಮಂಡ್ಯ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗ್ಯಾರಂಟಿ’ ಯೋಜನೆಗಳ ಕುರಿತು ನಮ್ಮ ಪಕ್ಷದ ಕೆಲವು ನಾಯಕರು, ಶಾಸಕರು ಹಾಗೂ ಸಚಿವರು ನೀಡುತ್ತಿರುವ ವ್ಯತಿರಿಕ್ತ ಹೇಳಿಕೆಗಳಿಗೆ ಕಡಿವಾಣ ಹಾಕಬೇಕೆಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಪತ್ರ ಬರೆದಿರುವ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ಕಾರಣದಿಂದ ಬೆಲೆ ಏರಿಕೆಯಿಂದ ತತ್ತರಿಸಿದ್ದ ಬಡ ಮತ್ತು ಮಧ್ಯಮ ವರ್ಗದ ಹಿತದೃಷ್ಟಿಯಿಂದ ಕೇಂದ್ರ ನಾಯಕರು ಮತ್ತು ತಮ್ಮಗಳ ಸಮ್ಮತಿಯಿಂದ ಮಹತ್ವ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತು. ಪ್ರತಿ ಮನೆಗೆ ಗ್ಯಾರಂಟಿ ಕಾರ್ಡ್‌ಗಳನ್ನು ಹಂಚಿ ಆಶ್ವಾಸನೆ ನೀಡಿತ್ತು. ಇದರ ಬಗ್ಗೆ ಐತಿಹಾಸಿಕ ಪ್ರಣಾಳಿಕೆಯನ್ನು ತಯಾರಿಸಿ ಅದನ್ನು ಜನರ ಮುಂದಿಟ್ಟು ವಾಗ್ದಾನ ಮಾಡಿತ್ತು. ಅದರ ಮೇಲೆ ವಿಶ್ವಾಸವಿಟ್ಟು ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ 136 ಸ್ಥಾನಗಳಲ್ಲಿ ಅಭೂತಪೂರ್ವ ಜಯಕ್ಕೆ ಕಾರಣಿಭೂತರಾದರು ಎಂದಿದ್ದಾರೆ.
ಜನಬಲದೊಂದಿಗೆ ಅಧಿಕಾರಕ್ಕೆ ಬಂದು ತಾವು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಕ್ಯಾಬಿನೆಟ್ ಸಭೆ ನಡೆಸಿ ಪ್ರಥಮ ಸಂಪುಟ ಸಭೆಯಲ್ಲಿಯೇ ಐದು ಗ್ಯಾರಂಟಿ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಆ ಗ್ಯಾರಂಟಿಗಳನ್ನು ಸರ್ಕಾರ 9 ತಿಂಗಳಲ್ಲಿ ಭರವಸೆ ನೀಡಿದಂತೆ ಜಾರಿಗೆ ತಂದಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಈಗ ಇಡೀ ದೇಶಕ್ಕೇ ಮಾದರಿಯಾಗಿವೆ ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಸರ್ಕಾರದಿಂದ ನೀಡುವ ಎರಡು ಸಾವಿರ ರೂ. ಉಳಿಸಿಕೊಂಡು ಬಂಗಾರ ಖರೀದಿ ಮಾಡಿದ ಮಹಿಳೆಯರಿದ್ದಾರೆ. ಫ್ರಿಜ್ ಖರೀದಿಸಿದವರಿದ್ದಾರೆ. ಸ್ಮಾರ್ಟ್ ಫೋನ್‌ಗಳನ್ನು ಖರೀದಿ ಮಾಡಿದವರಿದ್ದಾರೆ. ಈ ಹಣ ಮಕ್ಕಳ ಶಿಕ್ಷಣಕ್ಕೆ, ಹಿರಿಯರ ಔಷಧಕ್ಕೆ ಸಹ ನೆರವಾಗುತ್ತಿದೆ ಎಂದು ಅದೆಷ್ಟೋ ಜನರು ಹೇಳಿದ್ದಾರೆ. ನಮ್ಮ ಸರ್ಕಾರವನ್ನು ಹಾರೈಸಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯಿಂದ ಸಾಮಾನ್ಯ ಕುಟುಂಬದ ಮಹಿಳೆಯರು ರಾಜ್ಯದ ತೀರ್ಥ ಕ್ಷೇತ್ರಗಳನ್ನು ನೋಡುವ ಭಾಗ್ಯ ಲಭಿಸಿದೆ. ಗೃಹ ಜ್ಯೋತಿ ಯೋಜನೆಯಡಿ ನೀಡಲಾಗಿರುವ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಬಡವರಿಗೆ ಊರುಗೋಲಾಗಿದೆ. ಐಎನ್‌ಡಿಐಎ ಮೈತ್ರಿ ಕೂಟದ ಮೇಲೆ ವಿಶ್ವಾಸವಿಟ್ಟ ಜನ ಅಪಾರ ಪ್ರಮಾಣದಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಅಭ್ಯರ್ಥಿಗಳಿಗೆ ಮತನೀಡಿ ಎನ್‌ಡಿಎ ಮತ್ತೆ ಬಹುಮತ ಪಡೆಯಲು ತಡೆಯೊಡ್ಡಿದ್ದಾರೆ ಎಂದು ವಿವರಿಸಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಕರ್ನಾಟಕದಲ್ಲಿ ಉಂಟಾದ ಅಲ್ಪ ಹಿನ್ನಡೆಯಿಂದ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು, ಸಚಿವರು, ಮುಖಂಡರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಎಂಬ ಹೇಳಿಕೆಗಳನ್ನು ಬಹಿರಂಗವಾಗಿ ನೀಡುತ್ತಿದ್ದು ಇಂತಹ ಹೇಳಿಕೆಗಳನ್ನು ಯಾರೂ ಕೊಡದಂತೆ ಕಠಿಣ ಸೂಚನೆ ಕೊಡಬೇಕು ಎಂದು ಈ ಮೂಲಕ ಮನವಿ ಮಾಡುತ್ತಿದ್ದೇನೆ. ಇನ್ನು ನಮ್ಮ ಗ್ಯಾರಂಟಿ ಯೋಜನೆಗಳಿಂದ ಜನಮನ್ನಣೆ ಗಳಿಸಿರುವುದು ಕಳೆದ ವಿಧಾನಸಭೆ ಹಾಗೂ ಈಗಿನ ಲೋಕಸಭಾ ಚುನಾವಣೆಗಳಲ್ಲಿ ಪಡೆದ ಮತಗಳಿಕೆ ಪ್ರಮಾಣವನ್ನು ನೋಡಿದರೂ ಸಾಕು. ಇತ್ತೀಚೆಗೆ ಬಂದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಪಕ್ಷ 9 ಕ್ಷೇತ್ರಗಳನ್ನು ಗೆದ್ದರೂ ಮತಗಳಿಕೆಯಲ್ಲಿ ಗಣನೀಯವಾಗಿ ಹೆಚ್ಚಳ ಕಾಣಲಾಗಿದೆ. ಈ ಲೋಕಸಭೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷವು ಮತಗಳಿಕೆಯಲ್ಲಿ ಶೇ.14 ಹೆಚ್ಚಳ ಕಂಡಿದೆ. ಆದ್ದರಿಂದ ಬಡವರ ಪರವಾದ ಯೋಜನೆಗಳನ್ನು ಬಂದ್ ಮಾಡುವುದಿರಲಿ ಅಂತಹ ಹೇಳಿಕೆಗಳಿಂದಲೂ ಪಕ್ಷದ ಮೇಲಿನ ವಿಶ್ವಾಸ ಕಡಿಮೆಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.