

ಉಡುಪಿ: ಸಂವಿಧಾನದ ಪ್ರಕಾರ ನೆರೆ ದೇಶಗಳಿಂದ ಯುದ್ಧಭಿತಿ, ಜನಾಂಗೀಯ ಸಂರ್ಷ, ಆರ್ಥಿಕ ತುರ್ತುಪರಿಸ್ಥಿತಿ ಜಾರಿಗೊಳಿಸಬಹುದು. ಆದರೆ ಇಂದಿರಾಗಾಂಧಿ ತನ್ನ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ 352ನೇ ವಿಧಿ ದುರ್ಬಳಕೆ ಮಾಡಿಕೊಂಡಿದ್ದರು. ದೇಶವನ್ನೇ ಬಂಧಿಖಾನೆಯಾಗಿ ಪರಿವರ್ತಿಸಿದ್ದರು. ತುರ್ತುಪರಿಸ್ಥಿತಿಯಲ್ಲಿ ಸಂವಿಧಾನ ಮೇಲಿನ ಹಲ್ಲೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಹೇಳಿದರು.
ಜಿಲ್ಲಾ ಬಿಜೆಪಿ ವತಿಯಿಂದ ನಡೆದ ತುರ್ತು ಪರಿಸ್ಥಿತಿಯ ಕರಾಳ ದಿನಗಳ ನೆನಪು ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾ ರಂಗದ ಸ್ವಾತಂತ್ರ$್ಯಹರಣ ಮಾಡಿದ್ದರು. ವಿಶೇಷವಾಗಿ ಸರ್ಕಾರ ನಿಯಮಗಳಿಗೆ ವಿರುದ್ಧವಾಗಿ ನಡೆಯದ ಬದ್ಧತಾ ನ್ಯಾಯಾಂಗವೆಂಬ ಹೊಸ ಪರಂಪರೆಯನ್ನೇ ಹುಟ್ಟುಹಾಕಿದ್ದರು. ಪ್ರತಿ ಊರಿನಲ್ಲಿ ಮರಿ ಇಂದಿರಾಗಾಂಧಿಗಳು ಹುಟ್ಟಿದ್ದರು. ಇವರು ಹೇಳಿದವರನ್ನು ಜೈಲಿಗೆ ಹಾಕಲಾಗುತ್ತಿತ್ತು. ಜೀವಕ್ಕೆ ಬೆಲೆ ಇರಲಿಲ್ಲ. ಕಾಂಗ್ರೆಸ್ಗೆ ದೇಶನಿಷ್ಠೆಯವರು ಬೇಕಾಗಿಲ್ಲ. ಕುಟುಂಬಕ್ಕೆ ನಿಷ್ಠೆ ಇದ್ದರೆ ಉನ್ನತ ಸ್ಥಾನ ಲಭ್ಯವಾಗುತ್ತದೆ ಎಂದರು.
ಸಂವಿಧಾನ ಪೀಠಿಕೆಗೆ ಕಸಿ
ದೇಶದಲ್ಲಿ ವಿಪಕ್ಷ ನಾಯಕರು ಜೈಲಿನಲ್ಲಿರುವ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಗೆ ಮೇಲೆ ದುರ್ಮಾಂಸದ ಕಸಿ ಮಾಡಲಾಗಿದೆ. ಅಂಬೇಡ್ಕರ್ ತಿರಸ್ಕರಿಸಿದ್ದ ಸಮಾಜದವಾದ ಮತ್ತು ಜಾತ್ಯತಿತ ಶಬ್ದಗಳನ್ನು ಮತ್ತೆ ಸೇರಿಸಲಾಗಿತ್ತು. ಹೀಗಾಗಿ ನಮಗೆ ಅಂಬೇಡ್ಕರ್ ಸಂವಿಧಾನ ಬೇಕೆ ಹೊರತು ಇಂದಿರಾಗಾಂಧಿ ಸಂವಿಧಾನವಲ್ಲ ಎಂದರು.
ಬಿಜೆಪಿ ಅಂಬೇಡ್ಕರ್ ವಿರೋಧಿಯೇ?
1946ರಿಂದ ನೆಹರೂ ಕುಟುಂಬದ 3 ತಲೆಮಾರು ದೇಶವನ್ನಾಳಿದೆ. ಆದರೆ ಅಂಬೇಡ್ಕರ್ ಅವರಿಗೆ ಒಂದು ಸ್ಮಾರಕವನ್ನು ನಿರ್ಮಿಸಿರಲಿಲ್ಲ. 1990ರಲ್ಲಿ ವಾಜಪೇಯಿ ಪ್ರಸ್ತಾವನೆಗೆ ಮನ್ನಣೆ ನೀಡಿದ ಅಂದಿನ ವಿ.ಪಿ.ಸಿಂಗ್ ಸರ್ಕಾರ ಅಂಬೇಡ್ಕರ್ ಅವರಿಗೆ ಭಾರತರತ್ನ ಗೌರವ ನೀಡಿತ್ತು. ಮೋದಿ ಸರ್ಕಾರ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ 5 ಕ್ಷೇತ್ರಗಳನ್ನು ಪಂಚತೀರ್ಥವಾಗಿ ಅಭಿವೃದ್ಧಿಪಡಿಸಿದೆ ಎಂದರು.
ಕಾಂಗ್ರೆಸ್ ಮನಸ್ಥಿತಿ ಬದಲಾಗಿಲ್ಲ
ಕಾಂಗ್ರೆಸ್ ಸರ್ವಾಧಿಕಾರಿ ಮನಸ್ಥಿತಿ ಇಂದಿಗೂ ಬದಲಾಗಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಸಾಂವಿಧಾನಿಕ ಹುದ್ದೆಗಳನ್ನು ಕೈಗೊಂಬೆ ಮಾಡಿಕೊಂಡಿದ್ದನ್ನು ಮರೆಯುವಂತಿಲ್ಲ. ದ.ಕ. ಜಿಲ್ಲೆಯಲ್ಲಿ ಮಧ್ಯರಾತ್ರಿಯಲ್ಲಿ ವಿಪಕ್ಷ ಕಾರ್ಯಕರ್ತರ ಮನೆಗೆ ಪೊಲೀಸರನ್ನು ಕಳುಹಿಸಿರುವುದು ಮತ್ತು ವಿಧಾನ ಪರಿಷತ್ ಅಧ್ಯಕ್ಷರು ರೂಲಿಂಗ್ ಕೊಟ್ಟ ಮೇಲೂ ಮಧ್ಯರಾತ್ರಿ ನನ್ನನ್ನು ಬಂಧಿಸಿ, ಕಬ್ಬಿನಗದ್ದೆಗೆ ಕರೆದುಕೊಂಡು ಹೋಗಿದ್ದು ಕಾಕತಾಳೀಯವಲ್ಲ. ಹೀಗಾಗಿ ನಿರಂತರ ಜಾಗೃತಿ ಮೂಲಕ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ ಎಂದರು.
ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, ಲಾಲಾಜಿ ಮೆಂಡನ್, ಪ್ರಮುಖರಾದ ಉದಯ್ ಕುಮಾರ್ ಶೆಟ್ಟಿ, ರಾಜೇಶ್ ಕಾವೇರಿ, ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಶೆಟ್ಟಿ ಮೊದಲಾದವರಿದ್ದರು.