ಶಿಕ್ಷಕರು ಬೇಡಿಕೆಗಾಗಿ ಬೀದಿಗಿಳಿದರೆ ಶಿಕ್ಷಣ ಗುಣಮಟ್ಟ ಕುಸಿತ

udp-27-shikshaka
Published on

ಉಡುಪಿ: ಹಿರಿಯರು ನಿಸ್ವಾರ್ಥವಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕಾರಣ ನಾವೆಲ್ಲಾ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಲು ಸಾಧ್ಯವಾಗಿದೆ. ಶಿಕ್ಷಕರು ಸಂಬಳ, ಭಡ್ತಿಗಾಗಿ ಬೀದಿಗಿಳಿದರೆ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಾರೆ. ಹೀಗಾಗಿ ಶಿಕ್ಷಕರ ನ್ಯಾಯಯುತ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.

ಶನಿವಾರ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಜಿಲ್ಲಾ ಸಮಿತಿ ಆಶ್ರಯದಲ್ಲಿ ನಡೆದ ಶೈಕ್ಷಣಿಕ ಸಮ್ಮೇಳನದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು. ಹೊಸ ಶಿಕ್ಷಣ ನೀತಿಯ ಬಗ್ಗೆ ಚರ್ಚೆ ನಡೆಯಬೇಕು. ಈಗಿರುವ ಶಿಕ್ಷಣ ನೀತಿಯೂ ಉತ್ತಮವಾಗಿದೆ. ಒಟ್ಟಿನಲ್ಲಿ ಮಕ್ಕಳಿಗೆ ಜೀವನ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಗೌರವ
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಕರು ವೃತ್ತಿಯನ್ನು ಸೇವೆ ಎಂಬುದಾಗಿ ಭಾವಿಸಿ ಕೆಲಸ ಮಾಡಿದ್ದಾರೆ. ಹೀಗಾಗಿ ಶೈಕ್ಷಣಿಕ ಗುಣಮಟ್ಟ ಕಾಪಾಡಲು ಸಾಧ್ಯವಾಗಿದೆ. ವಿದ್ಯಾರ್ಥಿಗಳ ಜೀವನರೂಪಿಸುವಲ್ಲಿ ಪ್ರೌಢಶಾಲಾ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೌರವ ಕಡಿಮೆಯಾಗುತ್ತಿದೆ. ಪೂಜ್ಯಭಾವನೆ ಬೆಳೆಸುವ ನಿಟ್ಟಿನಲ್ಲಿ ಈ ವರ್ಷದಿಂದ ಶಿಕ್ಷಕರ ದಿನಾಚರಣೆಯನ್ನು ಜಿಲ್ಲೆಯಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ಸೆ.5ರಂದು ಬೆಳಗ್ಗೆ 9 ರಿಂದ 10 ಗಂಟೆವರೆಗೆ ಪ್ರತೀ ಶಾಲೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವ ಸಂಪ್ರದಾಯ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ ಬಿ. ಮಾತನಾಡಿದರು. ಡಿಡಿಪಿಐ ಎನ್.ಕೆ. ಶಿವರಾಜ್, ಡಯಟ್ ಉಪಪ್ರಾಂಶುಪಾಲ ಅಶೋಕ್ ಕಾಮತ್, ಎಸ್.ಆರ್ ಸಮೂಹ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ, ಗುರುಕುಲ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಟೀಚರ್ಸ್‌ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದಿನಕರ ಶೆಟ್ಟಿ, ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಶೆಟ್ಟಿ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಪ್ರಭಾಕರ್, ಕೊಡಗು ಜಿಲ್ಲಾಧ್ಯಕ್ಷ ಸೋಮಶೆಖರ್, ದ.ಕ. ಜಿಲ್ಲಾಧ್ಯಕ್ಷ ಮಹಮ್ಮದ್ ರಿಯಾಝ್ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಕೆ.ಕಿರಣ್ ಹೆಗ್ಡೆ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net