ಮೈಷುಗರ್ ವಿದ್ಯುತ್‌ ಬಿಲ್ ಮನ್ನಾ ಮಾಡಿ: ರಾಜ್ಯಸರ್ಕಾರಕ್ಕೆ ಎಂಎಲ್‌ಸಿ ದಿನೇಶ್ ಗೂಳಿಗೌಡ ಮನವಿ

Mlc Dinesh Gooligowda
Published on

ಮಂಡ್ಯ: ಮೈಷುಗರ್ ಕಾರ್ಖಾನೆಯ ವಿದ್ಯುತ್ ಬಿಲ್ ಮನ್ನಾ ಮಾಡುವ ವಿಚಾರವನ್ನು ಸಚಿವ ಸಂಪುಟದ ಮುಂದಿಟ್ಟು ತುರ್ತು ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.

ಈ ಕುರಿತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. ಮೈಷುಗರ್ ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಕಾರ್ಖಾನೆ. ಕಳೆದ 25 ವರ್ಷದಿಂದ ಅನಿವಾರ್ಯ ಕಾರಣದಿಂದ ವಿದ್ಯುತ್ ಬಿಲ್ ಕಟ್ಟದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ಇದರಿಂದ ಪಾರು ಮಾಡುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದ್ದು, ಸಂಪುಟ ಸಭೆ ಕರೆದು ಬಾಕಿ ಇರುವ ವಿದ್ಯುತ್ ಬಿಲ್ 52.25 ಕೋಟಿ ರೂಗಳನ್ನು ಮನ್ನಾ ಮಾಡಬೇಕು. ಹಲವು ವರ್ಷಗಳಿಂದ ಬಂದ್ ಆಗಿದ್ದ ಸಕ್ಕರೆ ಕಾರ್ಖಾನೆಯು ಕಳೆದ ವರ್ಷ ರಾಜ್ಯ ಕಾಂಗ್ರೆಸ್ ಸರ್ಕಾರದ ಮುತುವರ್ಜಿಯಿಂದ ಪುನರಾರಂಭಗೊಂಡಿತು. ಪ್ರಾರಂಭೋತ್ಸವ ಹಾಗೂ ಗ್ಯಾಂಗ್‌ಗಳಿಗೆ ನೀಡಲು 15 ಕೋಟಿ ರೂ, ದುಡಿಯುವ ಬಂಡವಾಳಕ್ಕಾಗಿ 35 ಕೋಟಿ ರೂ ಸೇರಿ 50 ಕೊಟಿ ರೂಗಳನ್ನು ಕಾರ್ಖಾನೆಯ ಪುನಶ್ಚೇತನಕ್ಕೆ ನೀಡಲಾಗಿದೆ ಎಂದಿದ್ದಾರೆ.

ಕಳೆದ ವರ್ಷ ಕಾರ್ಖಾನೆ 2 ಲಕ್ಷ 41 ಸಾವಿರ ಟನ್ ಕಬ್ಬನ್ನು ನುರಿಸಿದೆ. ರೈತರಿಗೆ ಕಬ್ಬಿನ ಹಣ ಪಾವತಿಯಾಗಿದೆ. ಕಾರ್ಖಾನೆಯಿಂದ ರೈತರಿಗೆ ತುಂಬ ಅನುಕೂಲವಾಗುತ್ತಿದೆ. ಈ ವರ್ಷ ಕನಿಷ್ಟ 2 ಲಕ್ಷ 5 ಸಾವಿರ ಟನ್ ಕಬ್ಬನ್ನು ನುರಿಸುವ ಸಂಬಂಧ ರೈತರು ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಆದರೆ, ಕಾರ್ಖಾನೆ ವಿದ್ಯುತ್ ಬಿಲ್ ಕಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ನೋಟಿಸ್ ನೀಡಿದೆ. ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಸಮರ್ಪಕವಾಗಿಲ್ಲ. ಕೋಟ್ಯಂತರ ರೂಪಾಯಿ ನಷ್ಟದಲ್ಲಿದೆ. ಅಷ್ಟೊಂದು ಹಣವನ್ನು ವಿದ್ಯುತ್ ಬಿಲ್ ಗೆ ಪಾವತಿಸಿದರೆ, ಈ ಹಂಗಾಮಿನಲ್ಲಿ ಕಬ್ಬು ನುರಿಸುವುದೇ ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಕ್ಯಾಬಿನೆಟ್‌ನಲ್ಲಿ ನಿರ್ಣಯ ಕೈಗೊಂಡು ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net