

ಕೋಲಾರ: ವಿಧಾನಸಭೆಯಿಂದ ಮೇಲ್ಮನೆ 7 ಸ್ಥಾನಗಳಿಗೆ ಜೂ.29ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಇಬ್ಬರು ಆಯ್ಕೆಯಾಗುವ ಅವಕಾಶಗಳಿದ್ದು, ಜಿಲ್ಲೆಗೆ ಮತ್ತೊಮ್ಮೆ ಸ್ಥಾನ ಸಿಗಬಹುದೆಂದು ಕಾಂಗ್ರೆಸ್ಸಿಗರು ನಿರೀಕ್ಷಿಸಿದ್ದಾರೆ.
ಹಾಲಿ ಸದಸ್ಯ ನಜೀರ್ ಅಹಮ್ಮದ್ ಮತ್ತೊಮ್ಮೆ ಅವಕಾಶ ಗಿಟ್ಟಿಸಿಕೊಳ್ಳಲು ಹಿರಿಯ ನಾಯಕರಾದ ಗುಲಾಬ್ ನಬೀ ಆಜಾದ್, ಅಹಮ್ಮದ್ ಪಟೇಲ್, ಮಾಜಿ ಸಿಎಂ ಸಿದ್ದರಾಮಯ್ಯ ಇನ್ನಿತರರ ಮೂಲಕ ಹೈಕಮಾಂಡ್ ಮನವೊಲಿಸುತ್ತಿದ್ದಾರೆ ಎನ್ನಲಾಗಿದೆ.
ನಜೀರ್ ಅಹಮ್ಮದ್ ಎಂಎಲ್‌ಸಿಯಾದರೆ ಮುಂದೆ ತಮಗೆ ಅನುಕೂಲವಾಗಬಹುದೆಂಬ ಉದ್ದೇಶದಿಂದ ಶಾಸಕ ಕೆ.ಆರ್.ರಮೇಶ್‌ಕುಮಾರ್ ಸಹ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಸೂಚ್ಯವಾಗಿ ಟಿಕೆಟ್ ವಿಚಾರ ಪ್ರಸ್ತಾಪಿಸಿದ್ದರೆ, ವಿರೋಧಿಗಳೊಂದಿಗೆ ಕೈಜೋಡಿಸಿ ಸೋಲಿಸಿದ್ದಾರೆ ಎಂಬ ಸಿಟ್ಟಿನಿಂದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಟಿಕೆಟ್‌ಗೆ ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಿದ್ದಾರೆಂದು ತಿಳಿದು ಬಂದಿದೆ.
ನಜೀರ್ ಎಂಎಲ್‌ಸಿಯಾದರೆ ಜಿಲ್ಲೆಗೆ ಲಾಭವೇನಿಲ್ಲ, ಜನರ ನಡುವೆ ಇರಲು ಬಯಸುವವರು ಆಯ್ಕೆಯಾದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದು ಕಾರ್ಯಕರ್ತರು ಆಶಯವಾಗಿದೆೆಯಾದರೂ ಹೈಕಮಾಂಡ್ ಲೆಕ್ಕಾಚಾರದ ಬಗ್ಗೆ ಜಿಜ್ಞಾಸೆ ವ್ಯಕ್ತಪಡಿಸಿದ್ದಾರೆ.
ಸುದರ್ಶನ್ ಪರ ಒಲವು: ಡಾ.ರಾಮಮನೋಹರ ಲೋಹಿಯಾ ವಿಚಾರಧಾರೆ, ಮಾಜಿ ಸಿಎಂಗಳಾದ ದಿ.ರಾಮಕೃಷ್ಣ ಹೆಗಡೆ, ದೇವರಾಜ ಅರಸು ಅವರ ಆಡಳಿತ ಶೈಲಿಗೆ ಮಾರು ಹೋಗಿರುವ ಸರಳ ಸಜ್ಜನಿಕೆಯ ರಾಜಕಾರಣಿ ವಿ.ಆರ್.ಸುದರ್ಶನ್ ಅವರು ಸದಸ್ಯರಾದಲ್ಲಿ ಪಕ್ಷಕ್ಕೆ ಮತ್ತು ಜನಹಿತ ಕಾಪಾಡಲು ಸಹಕಾರಿಯಾಗಲಿದೆ ಎಂಬುದು ಕಾಂಗ್ರೆಸ್‌ನಲ್ಲಿರುವ ಪ್ರಗತಿಪರರ ಆಶಯವಾಗಿದೆ.
ಜಯಪ್ರಕಾಶ ನಾರಾಯಣ ಪ್ರಭಾವಕ್ಕೆ ಒಳಗಾಗಿ ವಿದ್ಯಾರ್ಥಿ ಚಳವಳಿಯಲ್ಲಿ ತೊಡಗಿಕೊಂಡಿದ್ದ ಸುದರ್ಶನ್ 1977-78ರಲ್ಲಿ ಜನತಾ ಪರಿವಾರಕ್ಕೆ ಸೇರಿಕೊಂಡರು, ವಿಧಾನಸಭೆ ಪ್ರವೇಶಿಸಲು ಜಾತಿ, ಹಣದ ಬಲವಿಲ್ಲದೆ ವಿಫಲರಾಗಿದ್ದ ಇವರು, 1995ರಲ್ಲಿ ಎಲ್ಲ ಪಕ್ಷಗಳ ಸಹಕಾರದಿಂದ ವಿಧಾನ ಪರಿಷತ್‌ಗೆ ಪಕ್ಷೇತರರಾಗಿ ಆಯ್ಕೆಯಾಗಿ ನಂತರ ಕಾಂಗ್ರೆಸ್‌ಗೆ ಸೇರಿಕೊಂಡರು.
2000ನೇ ಇಸವಿಯಲ್ಲಿ ಮತ್ತೆ ಅದೇ ಮನೆಗೆ ಆಯ್ಕೆಯಾದ ಸುದರ್ಶನ್ 2004ರಿಂದ 2006ರವರೆಗೆ ಸಭಾಪತಿಯಾಗಿ ರಾಜ್ಯದ ಮುತ್ಸದ್ಧಿಗಳ ಗಮನ ಸೆಳೆದರು.
ಮೇಲ್ಮನೆ ಸದಸ್ಯತ್ವದ ಅವಧಿ ಮುಗಿದ ಬಳಿಕ ಮನೆಯಲ್ಲಿ ಕೂರದೆ, ಅಧಿಕಾರಕ್ಕಾಗಿ ಬೇರೆ ಪಕ್ಷಗಳ ಬಾಗಿಲು ತಟ್ಟದೆ ಕಾಂಗ್ರೆಸ್ ನಾಯಕರು ನೀಡಿದ ಜವಾಬ್ದಾರಿ ನಿಭಾಯಿಸುತ್ತಾ ಬಂದಿರುವ ಸುದರ್ಶನ್ ಅವರಿಗೆ 2013-2018ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿತ್ತಾದರೂ ಗಾಡ್ ಫಾದರ್‌ಗಳಿಲ್ಲದೆ ಟಿಕೆಟ್ ಕೈ ತಪ್ಪಿತ್ತು.
ಮೇಲ್ನೊಟಕ್ಕೆ ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿ ಕಾಣುತ್ತಿದ್ದರೂ ಊರು ಒಂದು ನೂರಾರು ಬಾಗಿಲು ಎಂಬಂತಾಗಿದೆ. ಹೊಂದಾಣಿಕೆ ರಾಜಕೀಯದಿಂದಾಗಿ ಪ್ರಬಲ ವಿರೋಧ ಪಕ್ಷವಾಗಲು ಅಡ್ಡಿಯಾಗಿದೆ, ಜಿಲ್ಲೆಯ ಅಭಿವೃದ್ಧಿ ಹಾಗೂ ಪಕ್ಷದ ವರ್ಚಸ್ಸು ಹೆಚ್ಚಲು ವಿ.ಆರ್.ಸುದರ್ಶನ್ ಅವರಂಥ ಜನಪ್ರತಿನಿಧಿ ಅವಶ್ಯವೆಂದು ಬುದ್ಧಿಜೀವಿಗಳ ಅಭಿಪ್ರಾಯವಾಗಿದ್ದು, ಕಾಂಗ್ರೆಸ್ ನೀತಿ ಮತ್ತು ಸಂಸ್ಕೃತಿ ಜನರ ಭಾವನೆಗಳಿಗೆ ಸ್ಪಂದಿಸುವುದೇ ಎಂಬುದು ತಿಳಿಯಲು ಜೂ.18ರವರೆಗೆ ಕಾಯುವುದು ಅನಿವಾರ್ಯ.
ನಾರಾಯಣಸ್ವಾಮಿ ಟಿಕೆಟ್ ಆಕಾಂಕ್ಷಿ: ಮಾಲೂರು ತಾಲೂಕಿನ ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮೂಲತಃ ಮುಳಬಾಗಿಲು ತಾಲೂಕಿನವರಾದರೂ ಬೆಂಗಳೂರಿನಲ್ಲಿ ನೆಲೆಸಿರುವ ರಾಜ್ಯಸಭೆಯ ಮಾಜಿ ಸದಸ್ಯ ರಾಜೀವ್‌ಗೌಡ ಪರವಾಗಿ ಕೆಲವರು ಒಲವು ತೋರಿದ್ದು ಹೈಕಮಾಂಡ್ ಜಿಲ್ಲೆಯಿಂದ ಯಾರನ್ನು ಪರಿಗಣಿಸುತ್ತದೋ ನೋಡಬೇಕು.