ಶಾಸಕರ ಮಾತಿಗೂ ಮನ್ನಣೆ ಇಲ್ಲವೇ?

Published on

ಯಲ್ಲಾಪುರ: ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆಯಲ್ಲಿ ಗುರುವಾರ ಸಾಮಾನ್ಯ ಸಭೆ ಸುದೀರ್ಘವಾಗಿ ನಡೆಯಿತು.

ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ನಡೆದ ಹಿಂದಿನ ಸಭೆಯಲ್ಲಿ ಆಡಳಿತಾಧಿಕಾರಿಯ 17 ತಿಂಗಳ ಅವಧಿ ಹಾಗೂ ಹಿಂದಿನ ಜಾತ್ರೆಯಲ್ಲಿ ನಡೆದ ಜಮಾ ಖರ್ಚುಗಳ ಕುರಿತು ವಿಶೇಷ ಸಭೆ ಕರೆಯಬೇಕೆಂದು ಶಾಸಕರು ಸೂಚಿಸಿದ್ದರೂ, ಸಭೆ ಕರೆಯದಿರುವ ಕುರಿತು ಶಾಸಕರ ಮಾತಿಗೂ ಮನ್ನಣೆ ಇಲ್ಲವೇ ಎಂದು ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು.

ಸಭೆ ಕುರಿತಾದ ಮಾಹಿತಿ ಪತ್ರಿಕೆಯನ್ನು ನಿಯಮಾವಳಿಯಂತೆ 7 ದಿನಗಳ ಪೂರ್ವದಲ್ಲಿ ನೀಡದೇ ಕೇವಲ 3 ದಿನ ಪೂರ್ವದಲ್ಲಿ ನೀಡಲಾಗಿದೆ, ಆಡಳಿತಾಧಿಕಾರಿ ಅವಧಿಯ 17 ತಿಂಗಳ ಖರ್ಚು ವೆಚ್ಚದ ಮಾಹಿತಿಯನ್ನು ಸದಸ್ಯರಿಗೆ ಏಕೆ ನೀಡಲಿಲ್ಲ ಎಂದು ರಾಧಾಕೃಷ್ಣ ನಾಯ್ಕ, ಸತೀಶ ನಾಯ್ಕ, ಸೋಮೇಶ್ವರ ನಾಯ್ಕ, ಸುನಂದಾ ದಾಸ್ ಪ್ರಶ್ನಿಸಿದರು.

ಪಟ್ಟಣ ಪಂಚಾಯಿತಿ ಕಚೇರಿಯಿಂದ ಕಡತ ಕಳ್ಳತನವಾದ ಬಗ್ಗೆ ದೂರು ದಾಖಲಿಸುವಾಗ ಆಡಳಿತಾಧಿಕಾರಿಗಳ ಅನುಮತಿ ಪಡೆದಿದ್ದೀರಾ? ಪ್ರಕರಣ ಈಗ ಯಾವ ಹಂತದಲ್ಲಿದೆ? ಸಂಬಂಧಪಟ್ಟ ಅಧಿಕಾರಿ ಬೇಜವಾಬ್ದಾರಿಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಸೈಯ್ಯದ ಕೈಸರ್ ಪ್ರಶ್ನಿಸಿದರು.
ಕಾಮಗಾರಿಯ ವಿವರದಲ್ಲಿ ಬೋರ್‌ವೆಲ್‌ಗಳ ಪೈಪ್‌ಲೈನ್ ಬದಲಿಸಲು 24 ಲಕ್ಷ ರೂ. ಇಡಲಾಗಿದೆ. ಒಂದೆಡರಡು ವರ್ಷದಲ್ಲಿ ಶಾಶ್ವತ ನೀರಿನ ಯೋಜನೆ ಕಾರ್ಯಾರಂಭ ಮಾಡುವುದರಿಂದ ಇಷ್ಟೊಂದು ಮೊತ್ತ ವೆಚ್ಚ ಮಾಡುವ ಅಗತ್ಯ ಇದೆಯೇ ಎಂದು ಕೆಲ ಸದಸ್ಯರು ಆಕ್ಷೇಪಿಸಿದರು. ತೀರಾ ಅಗತ್ಯ ಇರುವಲ್ಲಿ ಮಾತ್ರ ಪೈಪ್ ಬದಲಿಸಲು ಸಭೆ ಅನುಮತಿ ನೀಡಿತು.

ವಿವಿಧ ವಿಷಯಗಳ ಮೇಲೆ ಚರ್ಚೆ ನಡೆದು, ಸದಸ್ಯರು ಅನುಮೋದನೆ ನೀಡಿದರು. 9 ಸ್ಥಾಯಿ ಸಮಿತಿ ಸದಸ್ಯರ ಪರವಾಗಿ ಅಬ್ದುಲ್ ಅಲಿ ಕೆ. ಹಮೀದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಉಪಾಧ್ಯಕ್ಷ ಅಮಿತ ಅಂಗಡಿ, ಮುಖ್ಯಾಧಿಕಾರಿ ಸುನೀಲ ಗಾವಡೆ ಇತರರಿದ್ದರು.

ಮಾತಿನ ಚಕಮಕಿ

ವಾರ್ಡ್ ಸದಸ್ಯರ ಗಮನಕ್ಕೆ ತರದೇ ಕಾಮಗಾರಿ ಹಾಕಲಾಗಿದೆ. ಕಾಮಗಾರಿ ಹಾಕುವಾಗ ಸದಸ್ಯರನ್ನು ವಿಶ್ವಾಸಕ್ಕೆ ಯಾಕೆ ತೆಗೆದುಕೊಂಡಿಲ್ಲ ಎಂದು ಕಲ್ಪನಾ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು. ನೀವು ತಿಳಿಸಿದ ಕಾಮಗಾರಿ ಹೊರತಾಗಿ ಅಧ್ಯಕ್ಷರ ವಿವೇಚನೆಯಿಂದ ಹೆಚ್ಚುವರಿ ಕಾಮಗಾರಿ ಹಾಕಲಾಗಿದೆ ಎಂದು ಸತೀಶ ನಾಯ್ಕ ಸಮಜಾಯಿಸಿ ನೀಡಲು ಯತ್ನಿಸಿದರು. ಆಗ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net