

ಹುಬ್ಬಳ್ಳಿ: ಇಲ್ಲಿಯ ಕಿಮ್ಸ್ ನಲ್ಲಿ ಡೆಂಘೆ ಲಕ್ಷಣದ ರೋಗಿಗಳ ದಾಖಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳಿಯ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಕ್ಕಳಲ್ಲಿ ಡೆಂಘೆ ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಕಿಮ್ಸ್ ನ ಮಕ್ಕಳ ವಾರ್ಡ್ ಗಳನ್ನು ಪರಿಶೀಲನೆ ನಡೆಸಿದರು. ಡೆಂಘೆ ಚಿಕಿತ್ಸೆಗೆ ಉತ್ತಮ ವ್ಯವಸ್ಥೆ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ರಾಜ್ಯದಲ್ಲಿ ಡೆಂಘೆ ಹಾವಳಿ ಹೆಚ್ಚುತ್ತಿದೆ. ಕಿಮ್ಸ್ ನಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ರಾಜ್ಯ ಸರ್ಕಾರ ಅಗತ್ಯ ಸೌಕರ್ಯಗಳನ್ನು ನೀಡಬೇಕು. ಆರೋಗ್ಯ ಸಚಿವರು ಸಹ ರಾಜ್ಯ ಪ್ರವಾಸ ಮಾಡಿ ಆಸ್ಪತ್ರೆಗಳ ಪರಿಶೀಲನೆ ಮಾಡಬೇಕು ಎಂದು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಉತ್ತರ ಕರ್ನಾಟಕದ ಪ್ರತಿಷ್ಠಿತ ಕಿಮ್ಸ್ ನಲ್ಲಿ ಡೆಂಘೆ ಸಂಬಂಧಿತ ರೋಗಿಗಳು ಹೆಚ್ಚು ದಾಖಲಾಗುತ್ತಿದ್ದಾರೆ. ಇಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಕಿಮ್ಸ್ ಉತ್ತಮ ಕಾರ್ಯ ಮಾಡಿದೆ. ಅದೇ ರೀತಿ ಈಗ ಡೆಂಘೆ ರೋಗ ಚಿಕಿತ್ಸೆಗೂ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಭಾಗದ ಜನರು ಡೆಂಘೆ ಲಕ್ಷಣ ಕಂಡು ಬಂದರೆ ಕೂಡಲೇ ಕಿಮ್ಸ್ ಗೆ ದಾಖಲಾಗಬೇಕು. ಕೊನೇ ಘಳಿಗೆಯಲ್ಲಿ ಬಂದರೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಜನರು ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅವಳಿನಗರದಲ್ಲಿ ವಾರ್ಡ್ ಗೆ ಎರಡರಂತೆ ಫಾಗಿಂಗ್ ಯಂತ್ರ ಖರೀದಿಸಲು ಹಣಕಾಸಿನ ಸಹಾಯ ಮಾಡಬೇಕು. ಸೊಳ್ಳೆ ನಾಶ ಮಾಡಿದರೆ ಬಹುತೇಕ ಡೆಂಘೆ ನಿಯಂತ್ರಣಕ್ಕೆ ಬಂದಂತೆ ಆಗುತ್ತದೆ ಎಂದರು.
ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಮಾತನಾಡಿ, ಕಳೆದ ಜೂನ್ ಹಾಗೂ ಈ ತಿಂಗಳಿನಲ್ಲಿ ಹೆಚ್ಚು ಡೆಂಘೆ ಲಕ್ಷಣದ ರೋಗಿಗಳು ದಾಖಲಾಗುತ್ತಿದ್ದಾರೆ. ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡಲಾಗಿದೆ. ಅಪಾಯದಿಂದ ಹೊರಗೆ ಬಂದಿದ್ದಾರೆ. 15-18 ಮಕ್ಕಳು, ಇಬ್ಬರು ಐಸಿಯುನಲ್ಲಿ ದಾಖಲಾಗಿದ್ದಾರೆ. ಯಾರಿಗೂ ತೊಂದರೆ ಇಲ್ಲ ಎಂದರು.
ಡಾ. ಈಶ್ವರ ಹೊಸಮನಿ, ಡಾ. ರಾಜಶೇಖರ ದ್ಯಾಬೇರಿ, ಡಾ. ಸಚಿನ್ ಹೊಸಕಟ್ಟಿ ಇತರರು ಇದ್ದರು.