

ಹರಿಹರ: ನಗರದ ದರ್ಗಾ ಮುಂಭಾಗದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ನಿಯಮದ ಪ್ರಕಾರ ಸರ್ವೇ ಮಾಡಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ಬಿ.ಪಿ. ಹರೀಶ್ ತಾಕೀತು ಮಾಡಿದರು.
ಸೋಮವಾರ ಬೆಳಗ್ಗೆ ತಾಲೂಕು ಕಚೇರಿಗೆ ಭೇಟಿ ನೀಡಿದ ಶಾಸಕರು, ತಹಸೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಲೋಕೋಪಯೋಗಿ ಇಲಾಖೆ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳೊಂದಿಗೆ ದರ್ಗಾ ಮುಂಭಾಗದ ರಸ್ತೆ ಸರ್ವೇ ಕಾರ್ಯದ ಬಗ್ಗೆ ಚರ್ಚಿಸಿ ಮಾತನಾಡಿದರು.
ಈ ಹಿಂದೆ ರಸ್ತೆಯ ಅಗಲೀಕರಣ ಸಂದರ್ಭದಲ್ಲಿ ಯಾವ ಮಾನದಂಡ ಅನುಸರಿಸಿ ಕಟ್ಟಡ ತೆರವುಗೊಳಿಸದ್ದರೋ ಅದರಂತೆ ಸರ್ವೇ ಮಾಡಬೇಕು. ಯಾರದ್ದೋ ಒತ್ತಡಕ್ಕೆ ಮಣಿದು ವರದಿ ಸಿದ್ಧ್ದಪಡಿಸಿದರೆ ನಾನು ಒಪ್ಪುವುದಿಲ್ಲ ಎಂದರು.
ತಹಸೀಲ್ದಾರ್ ಪೃಥ್ವಿ ಸಾನಿಕಂ ಮಾತನಾಡಿ, ಈಗಾಗಲೇ ಡಿಸಿ ಆದೇಶದಂತೆ ದರ್ಗಾ ಮುಂಭಾಗದ ರಸ್ತೆ ಪಿಡಬ್ಲ್ಯೂಡಿ ಇಲಾಖೆ ಹಾಗೂ ಸರ್ವೇ ಇಲಾಖೆಯೊಂದಿಗೆ ಅಳತೆ ಮಾಡಲಾಗಿದ್ದು, ಇದರ ನೀಲಿನಕ್ಷೆ ಕೂಡ ಸಿದ್ಧಪಡಿಸಲು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸರ್ವೇ ಮಾಡಿದ ನಂತರ ನನ್ನ ಗಮನಕ್ಕೆ ತರಬೇಕೆಂಬುದು ನಿಮಗೆ ಗೊತ್ತಿಲ್ಲವೇ?. ಸರ್ವೇ ಮಾಡಿ ದಾಖಲೆ ಫೈಲ್‌ನಲ್ಲಿ ಇಟ್ಟುಕೊಂಡರೆ ಹೇಗೆ? ಎಂದು ತಹಸೀಲ್ದಾರರಿಗೆ ಶಾಸಕರು ತರಾಟೆ ತೆಗೆದುಕೊಂಡರು.
ತಹಸೀಲ್ದಾರ್ ಕಚೇರಿಗೆ ದೌಡಾಯಿಸಿದ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಾದ ಶಿವಮೂರ್ತಿ, ಸತೀಶ್ ನಾಯಕ್ ಸರ್ವೇ ವರದಿ ಶಾಸಕರ ಮುಂದೆ ತೆರೆದಿಟ್ಟರು.
ರಾಷ್ಟ್ರೀಯ ಹೆದ್ದಾರಿ ಅಳತೆ ಪ್ರಕಾರ ರಸ್ತೆಯ ಮಧ್ಯದಿಂದ ಒಂದು ಭಾಗಕ್ಕೆ 75 ಅಡಿ ಅಳತೆ ಮಾಡಲಾಗಿತ್ತು. ಈಗ ಸರ್ಕಾರವು ಈ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಪರಿವರ್ತಿಸಿದ ನಂತರ ರಸ್ತೆಯ ಮಧ್ಯದಿಂದ ಒಂದು ಭಾಗಕ್ಕೆ 60 ಅಡಿಗೆ ಸೀಮಿತಗೊಳಿಸಿದೆ. ಈ ಅಳತೆ ಪ್ರಕಾರವೇ ಸರ್ವೇ ಮಾಡಲಾಗಿದೆ ಎಂದು ತಿಳಿಸಿದರು.
ಆಗ ಶಾಸಕರು ನನಗೆ ಈಗಿನ ವರದಿ ಬೇಡ. ಆಗಲೀಕರಣ ಸಮಯದಲ್ಲಿ ಅನುಸರಿಸಿದ ನಿಯಮದಂತೆ ರಾಷ್ಟ್ರೀಯ ಹೆದ್ದಾರಿ ಅಳತೆಯಂತೆ ಕೂಡಲೇ ಸರ್ವೇ ಮಾಡಿ ವರದಿ ನೀಡಬೇಕು. ಒಂದು ವೇಳೆ ನೀವು ಯಾರದ್ದೋ ಒತ್ತಡಕ್ಕೆ ಮಣಿದು ತಪ್ಪು ವರದಿ ನೀಡಿದ್ದಲ್ಲಿ, ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.