

ಬೆಂಗಳೂರು: ಮಂಡ್ಯದ ಕಲ್ಲು ಕ್ರಷರ್ವೊಂದು ನಿಯಮ ಉಲ್ಲಂಘಿಸಿದೆ ಎಂದು ಜಿಲ್ಲಾಡಳಿತ 11 ಕೋಟಿ ರೂ. ದಂಡ ವಿಧಿಸಿದ್ದು, ಈ ತೀರ್ವನದ ಹಿಂದೆ ರಾಜಕೀಯ ಕಾರಣಗಳಿವೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸದನ ಸಮಿತಿಗೆ ವಹಿಸಬೇಕೆಂದು ಹಾಸನ ಜಿಲ್ಲೆಯ ಶಾಸಕರಾದ ಎಚ್.ಡಿ. ರೇವಣ್ಣ, ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ ಪಟ್ಟುಹಿಡಿದ ಪ್ರಸಂಗ ವಿಧಾನಸಭೆ ಯಲ್ಲಿ ಬುಧವಾರ ನಡೆಯಿತು.
ಮಂಡ್ಯದಲ್ಲಿ 223 ಕ್ರಷರ್ಗಳಿವೆ, ಕೆಲವೇ ಕ್ರಷರ್ಗಳನ್ನು ಗುರಿಯಾಗಿಟ್ಟುಕೊಂಡು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಹಾಗೂ ಗಣಿ ಭೂವಿಜ್ಞಾನಿ ಅಧಿಕಾರಿ ಉದ್ದೇಶಪೂರ್ವಕವಾಗಿ ಕ್ರಮ ಕೈಗೊಂಡಿದ್ದಾರೆಂದು ರೇವಣ್ಣ ಆರೋಪಿಸಿದರು.
ಈ ವೇಳೆ ಕೆ.ಆರ್. ಪೇಟೆ ಎಂದು ಬಾಲಕೃಷ್ಣ ಪ್ರಸ್ತಾಪಿಸಿದಾಗ ಸಚಿವ ನಾರಾಯಣ ಗೌಡ ಜಗಳಕ್ಕೆ ಬಿದ್ದರು. ಸಿ.ಟಿ. ರವಿ ಮತ್ತಿತರರು ಸಚಿವರನ್ನು ಸಮಾಧಾನಪಡಿಸಿ ಕೂರಿಸಿದರು. ಇನ್ನೊಂದೆಡೆ, ಪ್ರೀತಂಗೌಡ ಹಾಸನ ಜಿಲ್ಲೆಯ ಶಾಸಕರ ವಿರುದ್ಧ ತಿರುಗಿಬಿದ್ದರು. ಪ್ರೀತಂ ಮಾತಿಗೆ ರೇವಣ್ಣ
ತಡೆಹಾಕಲು ಪ್ರಯತ್ನಿಸಿದಾಗ, ನನ್ನ ಬಾಯಿ ಮುಚ್ಚಿಸಲು ಇದೇನು ಹಾಸನನಾ? ಇದೆಲ್ಲ ಮುಗೀತು, ಇನ್ನು ನಡೆಯಲ್ಲ ಎಂದು ಗಟ್ಟಿ ದನಿಯಲ್ಲಿ ಹೇಳಿದರು. ಶಿವಲಿಂಗೇಗೌಡರು ಮಾತು ಮುಂದುವರಿಸಿ, ತಮ್ಮದೂ ಕ್ರಷರ್ ಇದೆ. ಕ್ರಷರ್ ಇದ್ದರೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸವಾಗುತ್ತದೆ. ಹಾಗೆಯೇ ರಾಜ್ಯದಲ್ಲಿ ಯಾವುದೇ ಕ್ರಷರ್ ಕಾನೂನುಬದ್ಧವಾಗಿ ನಡೆಯಲ್ಲ ಎಂದರು.