ಸರ್ಕಾರಿ ಆಸ್ಪತ್ರೆಗೆ ಶಾಸಕರ ದಿಢೀರ್ ಭೇಟಿ

MLA's surprise visit to government hospital
ಸಿಂದಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಅಶೋಕ ಮನಗೂಳಿ ಭೇಟಿ ನೀಡಿದ ವೇಳೆ ಸಿಬ್ಬಂದಿ ಹಾಜರಿ ಪುಸ್ತಕ ಪರಿಶೀಲಿಸಿದರು. ರವಿರಾಜ ದೇವರಮನಿ ಇತರರಿದ್ದರು.
Published on

ಸಿಂದಗಿ: ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಅಶೋಕ ಮನಗೂಳಿ ಸೋಮವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿ, ಕಾರಣವಿಲ್ಲದೆ ಗೈರಾದ ಸಿಬ್ಬಂದಿ ವಿರುದ್ಧ ಗರಂ ಆದರಲ್ಲದೇ, ಕರ್ತವ್ಯದಲ್ಲಿ ನಿರ್ಲಕ್ಷೃ ಮಾಡಿದರೆ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಶಾಸಕರ ಭೇಟಿ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ, ಇತರೆ ವಿಭಾಗದ ವೈದ್ಯರು, ಕೆಲವು ಸಿಬ್ಬಂದಿ ರಜೆ ಪತ್ರ ನೀಡದೆ, ಅನಧಿಕೃತವಾಗಿ ಗೈರಾಗಿರುವುದು ಕಂಡು ಬಂತು. ಗೈರಾದ ಸಿಬ್ಬಂದಿ ಪಡೆದ ಶಾಸಕರು, ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಮೇಲ್ವಿಚಾರಕರಿಗೆ ಸೂಚನೆ ನೀಡಿದರು.

ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ವೈದ್ಯರು, ಸಿಬ್ಬಂದಿ ನಿಷ್ಕಾಳಜಿ ಕುರಿತು ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಹಲವು ರೋಗಿಗಳು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ದೂರಿದರೆ ಕೆಲವರು ಸೋಮವಾರ ಆಸ್ಪತ್ರೆಗೆ ಚಿಕಿತ್ಸೆಗೆ ಬರಲು ಹೇಳಿ ವೈದ್ಯರೇ ಬಂದಿಲ್ಲ ಎಂದು ತಮ್ಮ ಅಳಲು ಹೇಳಿಕೊಂಡರು.

ರೋಗಿಗಳ ಸಮಸ್ಯೆ ಆಲಿಸಿದ ಶಾಸಕರು, ಮುಂದಿನ ದಿನಗಳಲ್ಲಿ ಹೀಗಾಗಲು ಬಿಡುವುದಿಲ್ಲ. ಆಸ್ಪತ್ರೆಯ ಸ್ವಚ್ಛತೆ, ಸೂಕ್ತ ಸಮಯಕ್ಕೆ ಚಿಕಿತ್ಸೆ ಒದಗಿಸುವಂತೆ ಮಾಡುವುದಾಗಿ ಭರವಸೆ ನೀಡಿದರು. ಸಿಬ್ಬಂದಿಗೆ ಈ ಬಗ್ಗೆ ಎಚ್ಚರಿಕೆ ನೀಡಿದರು.

ಆರೋಗ್ಯ ಇಲಾಖೆ ಹಾಗೂ ಆಡಳಿತ ವಿಭಾಗದ ಮುಖ್ಯಸ್ಥರು ಮತ್ತು ಶಾಸಕ, ಸಚಿವರು ಭೇಟಿ ನೀಡಿದ ವೇಳೆ, ಭೇಟಿ ಪುಸ್ತಕದಲ್ಲಿ ನಮೂದಿಸಿ, ಷರಾ ಬರೆಯುವ ವಾಡಿಕೆಯಂತೆ ಭೇಟಿ ಪುಸ್ತಕವಿಲ್ಲದ್ದನ್ನು ಕಂಡು ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡು, ಭೇಟಿ ಪುಸ್ತಕ ನಿರ್ವಹಿಸುವಂತೆ ಸಲಹೆ ನೀಡಿದರು. ರವಿರಾಜ ದೇವರಮನಿ ಹಾಗೂ ತಾಲೂಕು ಆಸ್ಪತ್ರೆಯ ಕೆಲವು ವೈದ್ಯರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net