ರೈತರಿಗೆ ಸವಲತ್ತು ಸಿಗಲು ಶಾಸಕರು ಶ್ರಮಿಸಲಿ

15 ylp 03 (kisan)
Published on

ಯಲ್ಲಾಪುರ: ರೈತರಿಗೆ 15 ಲಕ್ಷ ರೂ.ವರೆಗೆ ಮಾಧ್ಯಮಿಕ ಸಾಲ ಮತ್ತು 5 ಲಕ್ಷ ಬೆಳೆ ಸಾಲ ನೀಡಬಹುದೆಂದು ಸರ್ಕಾರದ ಹಂತದಲ್ಲಿ ಆದೇಶವಾಗಿದ್ದರೂ ಅದು ಇನ್ನೂ ಜಾರಿಯಾಗದಿರುವ ಬಗ್ಗೆ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕಾರ ಕನಕನಹಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಂಘದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಸಾಲ-ಸೌಲಭ್ಯ ದೊರಕಿಸಿಕೊಡುವ ಬಗ್ಗೆ ಕ್ಷೇತ್ರದ ಶಾಸಕರು ಸರ್ಕಾರದ ಗಮನ ಸೆಳೆದು, ನ್ಯಾಯಾಲಯದ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸಿ ರೈತರಿಗೆ ಈ ಸವಲತ್ತು ಸಿಗಲು ಪ್ರಯತ್ನಿಸಬೇಕೆಂದು ಆಗ್ರಹಿಸಿದರು.

ಜಿಲ್ಲಾ ಮಧ್ಯ ಉತ್ತರ ಪ್ರಾಂತ ಸಂಘಟನಾ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ ಮಾತನಾಡಿ, ತಾಲೂಕು ಮತ್ತು ಗ್ರಾಮ ಸಮಿತಿ ಹಂತದಲ್ಲಿ ಸದಸ್ಯರಿಗೆ ಪ್ರಶಿಕ್ಷಣ ವರ್ಗ ನಡೆಸಬೇಕು. ಜಿಲ್ಲಾ ಸಮಿತಿಯ ಕಾರ್ಯಕಾರಿಣಿಗಳಿಗಾಗಿ ಎರಡು ದಿನದ ಪ್ರಶಿಕ್ಷಣ ವರ್ಗ ಹುಬ್ಬಳ್ಳಿಯ ಕೇಂದ್ರ ಕಚೇರಿಯಲ್ಲಿ ಮೇ 26 ಮತ್ತು 27 ರಂದು ನಡೆಯಲಿದೆ. ಜಿಲ್ಲೆಯ ಕಾರ್ಯಕಾರಿಣಿ ಸದಸ್ಯರು ಇದರಲ್ಲಿ ಭಾಗವಹಿಸಬೇಕು ಎಂದರು.

ಜಿಲ್ಲಾ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ, ಜಿಲ್ಲಾ ಕೋಶಾಧ್ಯಕ್ಷ ಗೋಪಾಲಕೃಷ್ಣ ಭಟ್ಟ ಉಪಳೇಶ್ವರ, ಪ್ರಾಂತ ಕಾರ್ಯಕಾರಿಣಿ ಸದಸ್ಯ ನರಸಿಂಹಮೂರ್ತಿ ಆಶೀಸರ, ಜಿಲ್ಲಾ ಸಮಿತಿಯ ಪ್ರಮುಖರಾದ ಶ್ರೀಧರ ಭಾಗ್ವತ ಗುಂದ, ಆರ್.ಎನ್. ಹೆಗಡೆ ಗುಂದ, ರಾಮಚಂದ್ರ ಕವಡಿಕೇರಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net