

ಕೆ.ಆರ್.ನಗರ : ತಾಲೂಕಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದ್ದು, ಅದನ್ನು ಕಾಪಾಡುವಲ್ಲಿ ವಿಫಲರಾಗಿರುವ ಶಾಸಕ ಡಿ.ರವಿಶಂಕರ್ ಅವರು ಕ್ಷೇತ್ರದ ಜನತೆ ಕ್ಷಮೆ ಕೇಳಬೇಕು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಒತ್ತಾಯಿಸಿದರು.
ತಾಲೂಕಿನ ಚಂದಗಾಲು ಗ್ರಾಮದ ಮಹದೇವನಾಯಕ ಅವರ ಕುಟುಂಬದವರು ಆತ್ಮಹತ್ಯೆಗೆ ಯತ್ನಿಸಿ ಇಬ್ಬರು ಸಾವನ್ನಪ್ಪಿದ್ದು, ಇದಕ್ಕೆ ಯಾರು ಹೊಣೆ? ಚೀರ‌್ನಹಳ್ಳಿ ಗ್ರಾಮದ ಲೋಕೇಶ್ ಎಂಬಾತನ ಬೆದರಿಕೆಯಿಂದ ಕುಟುಂಬ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅದನ್ನು ಅವರು ನಿರ್ಲಕ್ಷಿಸಿದ ಪರಿಣಾಮ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವ ಪ್ರಕರಣದ ಹೊಣೆಯನ್ನು ಶಾಸಕರೆ ಹೊರಬೇಕೆಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಹದೇವನಾಯಕ ಅವರ ಕುಟುಂಬದ ಆತ್ಮಹತ್ಯೆ ವಿಚಾರದಲ್ಲಿ ನಾನು ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದೇನೆ ಎಂದು ಶಾಸಕರು ತಿಳಿಸಿದ್ದಾರೆ. ಆದರೆ ಆ ದಿನ ಪ್ರಕರಣವನ್ನು ಮುಚ್ಚಿಹಾಕಲು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರಯತ್ನಿಸಿದ್ದು ಶಾಸಕರೇ, ದೂರು ದಾಖಲಿಸದಂತೆ ನೀವು ಹೇಳಿಲ್ಲ ಎಂದರೆ ಚೀರ್ನಹಳ್ಳಿ ಗ್ರಾಮದ ನಿಮ್ಮ ಪಕ್ಷದ ಲೀಡರ್ ಪೊಲೀಸರಿಗೆ ಹೇಳಿದ್ದಾರೆ ಎಂದು ಆರೋಪಿಸಿದರು.
ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಶಾಸಕರ ಅವಧಿಯಲ್ಲಿ ಕೆಲವು ಘಟನೆಗಳು ನಡೆದಿದ್ದವು ಎಂದು ಶಾಸಕರು ಹೇಳಿದ್ದಾರೆ. ಆದರೆ ಆಗ ಯಾರೋ ಗ್ರಾಮದಲ್ಲಿ ಪರಸ್ಪರ ವೈಯುಕ್ತಿಕ ವಿಚಾರಕ್ಕೆ ಹೊಡೆದಾಡಿ ಕೊಂಡಿದ್ದರು. ಅದು ಆ ಗ್ರಾಮದ ವಿಚಾರ ಆದರೆ. ಚಂದಗಾಲು ಗ್ರಾಮದಲ್ಲಿ ನಡೆದಿರುವುದು ಮುಂಚಿತವಾಗಿ ಪೊಲೀಸರಿಗೆ ತಿಳಿದಿತ್ತು ಎಂದರು.
ಜಿಪಂ ಮಾಜಿ ಸದಸ್ಯ ಎಂ.ಟಿ.ಕುಮಾರ್ ಮಾತನಾಡಿ, ಮಾಜಿ ಸಚಿವರಾದ ಸಾ.ರಾ.ಮಹೇಶ್ ಅಭಿವೃದ್ಧಿ ವಿಚಾರದಲ್ಲಿ ನನ್ನ ಜತೆ ಕೈಜೋಡಿಸಲಿ ಎಂದು ಶಾಸಕರು ಕೇಳಿದ್ದಾರೆ. ಆದರೆ ವಾಸ್ತವವಾಗಿ ಇಲ್ಲಿ ಒಂದು ವರ್ಷದಿಂದ ಯಾವ ಕೆಲಸಗಳು ನಡೆಯುತ್ತಿವೆ ಎಂದು ವ್ಯಂಗ್ಯವಾಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಕುಮಾರ್, ಸಾಲಿಗ್ರಾಮ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ ಮಾತನಾಡಿದರು.
ಚಂದಗಾಲು ಗ್ರಾ.ಪಂ.ಸದಸ್ಯ ಮಹದೇವನಾಯಕ, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಸಾಲಿಗ್ರಾಮ ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬೆಣಗನಹಳ್ಳಿಪ್ರಸನ್ನ ಇದ್ದರು.