ಡಿಪೋ ಮ್ಯಾನೇಜರ್‌ಗೆ ಶಾಸಕರ ತರಾಟೆ

MLAs scold depot manager
ಗುಳೇದಗುಡ್ಡ ಗುರುಸಿದ್ದೇಶ್ವರ ಮಠದ ಸಭಾಭವನದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ನೇತೃತ್ವದಲ್ಲಿ ತಾಲೂಕಿನ ಪ್ರಥಮ ಕೆಡಿಪಿ ಸಭೆ ಮಂಗಳವಾರ ನಡೆಯಿತು. ಮಧುರಾಜ ಕೂಡಲಗಿ, ಮಂಗಳಾ ಎಂ., ಮಲ್ಲಿಕಾರ್ಜುನ ಬಡಿಗೇರ, ಸುರೇಶ ಕೊಕರೆ, ಶಿವಾನಂದ ಸಾಗರ ಮತ್ತಿತರರಿದ್ದರು.
Published on

ಗುಳೇದಗುಡ್ಡ: ಕಚೇರಿಯಲ್ಲಿ ಕುಳಿತುಕೊಳ್ಳುವ ಬದಲು ರಸ್ತೆಗೆ ಹೋಗಿ ನೋಡಿದರೆ ಪ್ರಯಾಣಿಕರ ಸಮಸ್ಯೆ ಏನು ಎನ್ನುವುದು ನಿಮಗೆ ತಿಳಿಯುತ್ತೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಗುಳೇದಗುಡ್ಡ ಸಾರಿಗೆ ಸಂಸ್ಥೆ ಡಿಪೋ ಮ್ಯಾನೇಜರ್ ವಿದ್ಯಾ ನಾಯಕ ಅವರನ್ನು ತರಾಟೆಗೆ ತೆಗೆದುಕೊಂಡರು.

ಗುರುಸಿದ್ದೇಶ್ವರ ಮಠದ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕಿನ ಪ್ರಥಮ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲವು ಪ್ರಮುಖ ಸ್ಥಳಗಳಿಗೆ ರೂಟ್ ಬಸ್‌ಗಳಿಲ್ಲ. ಗುಳೇದಗುಡ್ಡದವರು ಹೈದರಾಬಾದ್, ಬಾದಾಮಿ ಡಿಪೋದವರು ಬಾದಾಮಿ ಪುಣೆ ಬಸ್ ಬಂದ್ ಮಾಡಿದ್ದೀರಿ. ಗುಳೇದಗುಡ್ಡದಿಂದ ಕೆರೂರ ಪಟ್ಟಣಕ್ಕೆ ಬಸ್ ಇಲ್ಲ. ಕೆರೂರ ಪಟ್ಟಣಕ್ಕೆ ಮೂರು ಶಿಫ್ಟ್ ಬಸ್ ಓಡಿಸುವಂತೆ ನಾನು ಹೇಳಿದ್ದೆ. ಹೇಳಿದ ಒಂದು ಕೆಲಸವನ್ನೂ ಮಾಡಿಲ್ಲ. ಪ್ರಯಾಣಿಕರು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ. ನಿಮ್ಮ ಮೇಲೆ ಸಾರ್ವಜನಿಕರ ದೂರುಗಳು ಬಹಳ ಇವೆ. ಮುಂದಿನ ಕೆಡಿಪಿ ಸಭೆಯೊಳಗೆ ಹೇಳಿದ ಕೆಲಸ ಮಾಡದಿದ್ದರೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.

ವಸತಿ ನಿಲಯ, ಅಂಗನವಾಡಿಗಳಿಗೆ ಕಟ್ಟಡಗಳ ಅಗತ್ಯ ಇದೆ. ಬಾದಾಮಿ, ಗುಳೇದಗುಡ್ಡ ಹಾಗೂ ಕೆರೂರ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಿ ಸ್ಥಳ ಗುರುತಿಸಿಕೊಳ್ಳಿ. 15 ದಿನದೊಳಗಾಗಿ ಆ ಜಾಗಗಳು ನಿಮ್ಮ್ಮ ಇಲಾಖೆಯ ಹೆಸರಿನಲ್ಲಿರಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಕೆಲ ಇಲಾಖೆ ಅಧಿಕಾರಿಗಳು ಸರಿಯಾದ ಮಾಹಿತಿ ಇಲ್ಲದೆ ಸಭೆಗೆ ಬಂದಿದ್ದರು. ಈ ರೀತಿಯ ವರ್ತನೆ ಸರಿಯಲ್ಲ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ತಾಲೂಕಿನ ಎಲ್ಲ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆ, ಪಿಎಚ್‌ಸಿ ಹಾಗೂ ಸರ್ಕಾರಿ ಶಾಲೆಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರೆ ಸಮಸ್ಯೆಗಳಿಗೆ ತಕ್ಷಣ ಪರಹಾರ ದೊರೆಯಲು ಸಾಧ್ಯ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ನಿಮ್ಮ ಅನುಭವ, ಜ್ಞಾನ ಅವರಿಗೂ ದೊರಕಲಿ. ನೀವು ನಿಮ್ಮ ಇಲಾಖೆಗೆ ಮಾತ್ರ ಸೀಮಿತವಾಗದೆ, ಕಡ್ಡಾಯವಾಗಿ ಆಸ್ಪತ್ರೆ ಹಾಗೂ ಸರ್ಕಾರಿ ಶಾಲೆಗೆ ಭೇಟಿ ನೀಡಿ ನನಗೆ ವರದಿ ಸಲ್ಲಿಸಿ ಎಂದು ಸೂಚಿಸಿದರು.

ವಿದ್ಯಾರ್ಥಿನಿಯರಿಗೆ ವಿತರಿಸುವ ಸ್ಯಾನಿಟರಿ ಪ್ಯಾಡ್ ಕಿಟ್ ಸರಿಯಾಗಿ ವಿತರಣೆಯಾಗುತ್ತಿಲ್ಲ ಎಂಬ ದೂರುಗಳಿವೆ. ಬಿಇಒ, ಟಿಎಚ್‌ಒ ಇದನ್ನು ಗಂಭೀರವಾಗಿ ಪರಿಗಣಿಸಿ, ಅನುದಾವಿಲ್ಲ ಎಂಬ ನೆಪ ಹೇಳದೆ ಕಡ್ಡಾಯವಾಗಿ ವಿತರಿಸುವ ಕೆಲಸವಾಗಬೇಕು. ಎಸ್‌ಎಸ್‌ಎಲ್‌ಸಿ ಲಿತಾಂಶ ಹೆಚ್ಚಿಸಲು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚುವರಿ ಕ್ಲಾಸ್ ತೆಗೆದುಕೊಳ್ಳಿ. ಈ ಬಾರಿ ತಾಲೂಕಿನ ಎಸ್‌ಎಸ್‌ಎಲ್‌ಸಿ ಲಿತಾಂಶ ಶೇ.100 ದಾಖಲಾಗಬೇಕು ಎಂದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಬಾದಾಮಿ ತಹಸೀಲ್ದಾರ್ ಮಧುರಾಜ ಕೂಡಲಗಿ, ಗುಳೇದಗುಡ್ಡ ತಹಸೀಲ್ದಾರ್ ಮಂಗಳಾ ಎಂ., ಗುಳೇದಗುಡ್ಡ ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ, ಬಾದಾಮಿ ತಾಪಂ ಇಒ ಸುರೇಶ ಕೊಕರೆ, ತಾಲೂಕು ಉಸ್ತುವಾರಿ ಅಧಿಕಾರಿ ಶಿವಾನಂದ ಸಾಗರ ವೇದಿಕೆ ಮೇಲಿದ್ದರು. ಕೆಡಿಪಿ ಸಭೆಯ ಸದಸ್ಯರಾದ ಕೈಲಾಸ ಕುಂಬಾರ, ಪ್ರಕಾಶ ಮುರಗೋಡ, ಲೆಂಕೆಪ್ಪ ಹಿರೇಕುರುಬರ, ಸೈಯದ್‌ಸಾಬ ಖಾಜಿ, ಗೋಪಾಲ ಜಾಧವ, ಲತಾ ತಾಪಡಿಯಾ ಇದ್ದರು. ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳಿದ್ದರು.

ಬೇಸಿಗೆ ಸಮೀಪಿಸುತ್ತಿದ್ದು, ಮತಕ್ಷೇತ್ರದ ಯಾವುದೇ ಹಳ್ಳಿಗೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಲೇ ಸಿದ್ಧತೆ ಮಾಡಿಕೊಳ್ಳಿ. ಗ್ರಾಮೀಣ ಪ್ರದೇಶದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗುವಂತಿಲ್ಲ. ಅನುದಾನ ಇಲ್ಲವೆಂದು ನೆಪ ಹೇಳಬೇಡಿ. ಭೀಮಸೇನ ಚಿಮ್ಮನಕಟ್ಟಿ, ಶಾಸಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net