

ಕೋಲಾರ: ಮಾವಿಗೆ ಬೆಂಬಲ ಬೆಲೆ ಕಲ್ಪಿಸುವಂತೆ ಒತ್ತಾಯಿಸಿ ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಮುಳಬಾಗಿಲು ಸಮೃದ್ಧಿ ಮಂಜುನಾಥ್ ನೇತೃತ್ವದಲ್ಲಿ ಮಾವು ಬೆಳೆಗಾರರು ಬೆಂಗಳೂರಿನ ವಿಧಾನಸೌಧದ ಎದುರು ಬುಧವಾರ ಪ್ರತಿಭಟನೆ ನಡೆಸಿ, ಸಚಿವ ಸಂಪುಟದಲ್ಲಿ ರ್ನಿಣಯ ಕೈಗೊಳ್ಳುವಂತೆ ಪಟ್ಟು ಹಿಡಿದರು.
ಮಾವು ಬೆಲೆ ಕುಸಿತದಿಂದ ಬೆಳೆಗಾರರು ಕಳೆದ ಒಂದುವಾರದಿಂದ ಬೆಂಬಲ ಬೆಲೆಗಾಗಿ ಎದುರು ನೋಡುತ್ತಿದ್ದಾರೆ. ಕೆಜಿಗೆ 15 ರೂ. ನಿಗದಿಪಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ, ತೋಟಗಾರಿಕೆ ಸಚಿವ ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರಿಗೆ ಮನವಿ ಸಲ್ಲಿಸಿದ್ದರೂ ಕ್ರಮವಾಗಿಲ್ಲ.
ಆಂಧ್ರದಲ್ಲಿ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಂತೆ ಅಲ್ಲಿನ ಸರ್ಕಾರ 1 ಕೆಜಿ ತೋತಾಪುರಿಗೆ ಫ್ಯಾಕ್ಟರಿ 8 ರೂ., ಸರ್ಕಾರದಿಂದ 4 ರೂ. ಸೇರಿ ಒಟ್ಟು 12 ರೂ. ನಿಗದಿಪಡಿಸಿದೆ. ರೈತರ ಬಗ್ಗೆ ಆಂಧ್ರ ಸರ್ಕಾರಕ್ಕಿರುವ ಕಾಳಜಿ ರಾಜ್ಯ ಸರ್ಕಾರಕ್ಕೆ ಏಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾವು ಬೆಳೆಗಾರರಾದ ಚಿನ್ನಪ್ಪರೆಡ್ಡಿ, ಬೆಲಂ ಶ್ರೀನಿವಾಸರೆಡ್ಡಿ, ಈರಪ್ಪರೆಡ್ಡಿ, ವೆಂಕಟೇಶ್ ಇದ್ದರು.