ಅರಕಲಗೂಡು : ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದ ಶಾಸಕರು ಬೇರೆಯವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ವಿ. ಗುರುಮೂರ್ತಿ ಟೀಕಿಸಿದರು.
ಪಟ್ಟಣದ ಸಮಗ್ರ ಅಭಿವೃದ್ಧಿ ಹಿನ್ನೆಲೆಯಲ್ಲಿ 2041ರ ಮಾಸ್ಟರ್ ಪ್ಲಾೃನ್ ಸಿದ್ಧಗೊಂಡಿದ್ದು, ಯುವಕರಿಗೆ ಉದ್ಯೋಗ ನೀಡುವ ಸಲುವಾಗಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀಧರ್ ಗೌಡ ಅವರ ನೇತೃತ್ವದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ಭೇಟಿ ಮಾಡಿ ಕೈಗಾರಿಕಾ ವಲಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿತ್ತು. ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಿಸಿಕೊಡುವುದು ಶ್ರೀಧರ್ ಗೌಡರ ಕನಸಾಗಿದೆ. ಈ ಹಿನ್ನೆಲೆಯಲ್ಲಿ ಮಾಸ್ಟರ್ ಪ್ಲಾೃನ್ ಮಾರ್ಪಾಡು ಮಾಡುವಂತೆ ಮನವಿ ಮಾಡಲಾಗಿದೆ. ಇದನ್ನು ಸಹಿಸದ ಶಾಸಕರು ಜೋನ್ ಬದಲಾವಣೆಗಾಗಿ ಅರ್ಜಿದಾರರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಕಳೆದ 40ವರ್ಷಗಳಿಂದ ಅವರು ಎಂದೂ ಕೂಡ ಅಭಿವೃದ್ಧಿ ಪರ ರಾಜಕಾರಣ ಮಾಡಿಲ್ಲ. ನಾಲ್ಕು ದಶಕಗಳ ಕಾಲ ಶಾಸಕರಾಗಿದ್ದರೂ ಪಟ್ಟಣಕ್ಕೆ ಕನಿಷ್ಠ ಒಳ ಚರಂಡಿ ವ್ಯವಸ್ಥೆ ಕಲ್ಪಿಸಲು ಆಗಿಲ್ಲ. ಇದು ನಾಚಿಗೇಡಿನ ಸಂಗತಿ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಪಟ್ಟಣದಲ್ಲಿ ಬಡವರಿಗೆ ನಿವೇಶನ ಹಂಚದೆ ಶಾಸಕರು ಚುನಾವಣೆ ಸಮಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದು, ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಸಾಲಗೇರಿ ರಸ್ತೆ ವಿಸ್ತರಣೆಗೆ ಮನೆ ಕಳೆದುಕೊಳ್ಳುವ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಪ.ಪಂ. ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ನಿಯಮಾನುಸಾರ ನೊಂದವರಿಗೆ ಪರಿಹಾರ ಸಿಕ್ಕಿದ್ದರೆ ಏಕೆ ಕೋರ್ಟ್ ಮೆಟ್ಟಿಲೇರುತ್ತಿದ್ದರು. ಎ. ಮಂಜು ಅವರು ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಸಂತ್ರಸ್ತರಿಗೆ ಪರಿಹಾರ ಕೊಡಿಸದೆ ಮೋಸ ಮಾಡಿದರು. ಈಗ ಅಭಿವೃದ್ಧಿಗೆ ಅಡ್ಡಗಾಲು ಹಾಕಿದವರಿಗೆ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹುದ್ದೆ ನೀಡಲಾಗಿದೆ ಎಂದು ಶಾಸಕರು ಆರೋಪಿಸುತ್ತಾರೆ. ಮನೆಗಳನ್ನು ಕಳೆದುಕೊಂಡಿರುವ ನೊಂದ ನಿವಾಸಿಗಳಿಗೆ ಈಗಲೂ ಪರಿಹಾರ ಕೊಡಿಸಲಿ. ಶಾಸಕರು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುವುದು ಅವರಿಗೆ ಶೋಭೆ ತರವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಮನಾಥಪುರದಲ್ಲಿ ಮಾತ್ರ ರಸ್ತೆ ವಿಸ್ತರಣೆಗೆ ಜಾಗ ಬಿಡದೆ ಪೆಟ್ರೋಲ್ ಬಂಕ್, ವಾಣಿಜ್ಯ ಮಳಿಗೆ ಕಟ್ಟಡಗಳನ್ನು ಕಟ್ಟಿಕೊಂಡಿರುವ ಶಾಸಕರು ಅಭಿವೃದ್ಧಿಗೆ ಅಡ್ಡಗಾಲು ಹಾಕಿದ್ದಾರೆ ಎಂದು ಆರೋಪಿಸಿದರು.
ನಗರ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ದೊಡ್ಡಕಾಳಯ್ಯ ಸುದ್ದಿಗೋಷ್ಠಿಯಲ್ಲಿದ್ದರು.
----------
ಚಿತ್ರ ಶೀರ್ಷಿಕೆ
ಅರಕಲಗೂಡು ಸಮಗ್ರ ಅಭಿವೃದ್ಧಿಗೆ ಸಿದ್ದಗೊಂಡಿರುವ 2041ರ ನಕ್ಷೆ ಪ್ರದರ್ಶಿಸಿದ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ವಿ. ಗುರುಮೂರ್ತಿ, ಸದಸ್ಯ ದೊಡ್ಡಕಾಳಯ್ಯ.