ಬೆಂಗ್ಳೂರಲ್ಲಿ ಶಾಸಕರ ಠಿಕಾಣಿ: ತಮ್ಮೂರಲ್ಲೇ ನಡೆಯುತ್ತಿರುವ ನುಡಿಹಬ್ಬಕ್ಕೆ ಅತಿಥಿಯಂತಾದರು

priyanka kharge
Published on

ಕಲಬುರಗಿ: ತೊಗರಿ ನಾಡು ಕಲಬುರಗಿಯಲ್ಲಿ ನುಡಿ ಜಾತ್ರೆ ಸಡಗರ ಮನೆ ಮಾಡಿದೆ. ಆದರೆ ಇದನ್ನು ಇನ್ನಷ್ಟು ಅದ್ದೂರಿಯಾಗಿಸುವ ಹೊಣೆ ಹೊತ್ತ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಡಿಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅತಿಥಿಗಳಂತೆ ನಡೆದುಕೊಂಡರೆ, ಆಡಳಿತ ಪಕ್ಷದ ಬಹುತೇಕ ಶಾಸಕರು ಮಂತ್ರಿಗಿರಿಗಾಗಿ ಬೆಂಗಳೂರಲ್ಲೇ ಬೀಡುಬಿಟ್ಟಿದ್ದಾರೆ. ಇದು ಸಹಜವಾಗಿಯೇ ಕನ್ನಡಿಗರಲ್ಲಿ ಬೇಸರ ಮೂಡಿಸಿದೆ.

ಸಮ್ಮೇಳನ ಯಶಸ್ವಿಯಾಗಿಸಲು ನಿರ್ಧರಿಸಿರುವ ಸ್ವಾಗತ ಸಮಿತಿ ಪ್ರಧಾನ ಸಂಚಾಲಕರೂ ಆಗಿರುವ ಜಿಲ್ಲಾಧಿಕಾರಿ ಶರತ್ ಬಿ., ಕಸಪಾ ಅಧ್ಯಕ್ಷ ಡಾ.ಮನು ಬಳಿಗಾರ್, ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ತಮ್ಮದೇ ಆದ ತಂಡ ಕಟ್ಟಿಕೊಂಡು ಎಲ್ಲ ವ್ಯವಸ್ಥೆಗಳಲ್ಲಿ ತೊಡಗಿದ್ದಾರೆ. ಆದರೆ, ಆಡಳಿತ ಪಕ್ಷದ ಶಾಸಕರು ಮಾತ್ರ ರಾಜ್ಯ ರಾಜಧಾನಿಯಲ್ಲೇ ಠಿಕಾಣಿ ಹೂಡಿ ತಮ್ಮ ನಾಯಕರ ಮೂಲಕ ವರಿಷ್ಠರ ಮೇಲೆ ಒತ್ತಡ ಹೇರುವ ಕೆಲಸದಲ್ಲಿ ನಿರತರಾಗಿದ್ದಾರೆ.

ಇನ್ನು ಆಡಳಿತ ಪಕ್ಷಕ್ಕಿಂತ ಪ್ರತಿಪಕ್ಷ ಶಾಸಕರು ಅಧ್ಯಕ್ಷರಾಗಿರುವ ಸಮಿತಿಗಳು ತಯಾರಿಯಲ್ಲಿ ತೊಡಗಿವೆ. ಸರ್ಕಾರ ಸಮರ್ಪಕ ಅನುದಾನ ಬಿಡುಗಡೆ ಮಾಡಿಲ್ಲವೆಂದು ಆರೋಪಿಸಿ ಕಾಂಗ್ರೆಸಿಗರು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ನೀಡಲು ಮುಂದಾಗಿದ್ದಾರೆ. ಸಮ್ಮೇಳನ ಉದ್ಘಾಟನೆ ದಿನವಾದ ಬುಧವಾರ ಕಾರಜೋಳ ಅವರೇ ಅತಿಥಿಯಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಜತೆ ಬಂದು ಅವರೊಟ್ಟಿಗೆ ವಾಪಸಾಗಲಿದ್ದಾರೆ. ಇವರ್ಯಾರಿಗೂ ಸಮ್ಮೇಳನದ ಖ್ಯಾಲ್ ಇಲ್ಲ ಎಂದು ಸ್ಥಳೀಯ ಭಾಷೆಯಲ್ಲಿ ಜನತೆ ಟೀಕಿಸಿದ್ದಾರೆ.

ಸಮ್ಮೇಳನ ಹೊತ್ತಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೇ ಆಗಾಗ್ಗೆ ಬಂದು ಸಭೆಗಳನ್ನು ನಡೆಸಬೇಕಿತ್ತು, ಅದು ಆಗಲಿಲ್ಲ. ಈಗ ಕೊನೆಯ ಹಂತದ ತಯಾರಿ ನೋಡಿಕೊಳ್ಳಬೇಕಾದ ಶಾಸಕರು ಸಚಿವ ಸ್ಥಾನದ ಲಾಬಿ ಮಾಡುತ್ತ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಇದರಿಂದ ಸಮ್ಮೇಳನಕ್ಕೆ ಒಂದಿಷ್ಟು ತೊಂದರೆ ಆಗಬಹುದು. | ಪ್ರಿಯಾಂಕ್ ಖರ್ಗೆ ಮಾಜಿ ಸಚಿವ

| ಬಾಬುರಾವ ಯಡ್ರಾಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net