

ಬೆಂಗಳೂರು: ಗಾಂಧಿನಗರ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ, ಅದಕ್ಷತೆಯ ಕೆಲಸ ನಡೆದಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಆರೋಪಿಸಿದ್ದಾರೆ.
ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ವರ್ಷಗಳಿಂದ ಕಸದ ಗುತ್ತಿಗೆಯಲ್ಲಿ 2 ಕೋಟಿ 37 ಲಕ್ಷ ರೂ. ನಕಲಿ ಬಿಲ್ ಮಾಡಿ ಹಣ ಪಡೆದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಇದೇನೂ ಸಣ್ಣ ಮೊತ್ತವಲ್ಲ. ಶಾಸಕರ ಗಮನಕ್ಕೆ ಬರದೆ ಯಾವುದೇ ಬಿಲ್ ಪಾವತಿ ಆಗುವುದಿಲ್ಲ. ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಇದರ ಬಗ್ಗೆ ಮಾಹಿತಿ ಇಲ್ಲವೆಂದರೆ ಅದನ್ನು ನಂಬುವುದು ಹೇಗೆ ಎಂದು ಪ್ರಶ್ನಿಸಿದರು.
ತಮ್ಮ ಕ್ಷೇತ್ರದಲ್ಲಿ ಕಸ ವಿಲೇವಾರಿ ಆಗುತ್ತಿದೆಯೇ? ಸಮರ್ಪಕವಾಗಿ ಆಗುತ್ತಿದೆಯೇ? ಜನರಿಗೆ ಅನುಕೂಲಕರ ಆಗುತ್ತಿದೆಯೇ ಎಂಬುದಕ್ಕೆ ಗಮನ ಕೊಡದೇ ಇವರು ಕರ್ತವ್ಯದಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಸರ್ಕಾರ ಬಿಬಿಎಂಪಿ ವಿಶೇಷ ಕಮೀಷನರ್ ವಿಕಾಸ್ ಕಿಶೋರ್ ಎಂಬುವರನ್ನು ತನಿಖೆಗೆ ನೇಮಿಸಿದೆ. ಅಧಿಕಾರಿಗಳು ಕೈಜೋಡಿಸದೆ ಗುತ್ತಿಗೆದಾರ ಈ ಮೊತ್ತ ಪಡೆಯಲು ಸಾಧ್ಯವೇ ಇಲ್ಲ ಎಂದು ವಿವರಿಸಿದರು.
ಎಲ್ಲ ಸೇರಿ 2 ಕೋಟಿ ರೂ. ನುಂಗಿ ಹಾಕಿದಂತಿದೆ. ತನಿಖೆ ಮಾಡಿದರೆ ಅದೆಷ್ಟು ಕೋಟಿ ಆಚೆ ಬರುತ್ತದೋ ಗೊತ್ತಿಲ್ಲ ಎಂದು ತಿಳಿಸಿದರಲ್ಲದೇ, ಇವರ ಕ್ಷೇತ್ರದಲ್ಲಿ ಈಚೆಗೆ ಗೇಟ್ ಬಿದ್ದು ಮಗು ಸತ್ತುಹೋಗಿತ್ತು. ಕಳಪೆ ಕಾಮಗಾರಿಯಿಂದ ಹೀಗಾಗಿದೆ. ಆದರೆ ಗುತ್ತಿಗೆದಾರರ ಮೇಲೆ ಕೊಲೆ ಕೇಸ್ ಹಾಕಿಲ್ಲ. ಅಲ್ಲದೇ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿವೆ. ಅದಕ್ಷತೆಯಿಂದ ಕೆಲಸಗಳು ನಡೆಯುತ್ತಿವೆ ಎಂದು ಆರೋಪಿಸಿದರು.