

ಆರ್.ತುಳಸಿಕುಮಾರ್
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರದೇಶ (ಜಿಬಿಎ) ವ್ಯಾಪ್ತಿಯ ಬಿಬಿಎಂಪಿಯ ಏರಿಯಾವನ್ನೇ ಬಳಸಿಕೊಂಡು ಐದು ಹೊಸ ಪಾಲಿಕೆಗಳನ್ನು ರಚಿಸಿ ಕರಡು ಅಧಿಸೂಚನೆ ಹೊರಡಿಸಿರುವ ಸರ್ಕಾರದ ನಡೆಗೆ ನಗರದ ಶಾಸಕರು ತಗಾದೆ ಎತ್ತಿದ್ದಾರೆ.
ಒಂದು ವಿಧಾನಸಭಾ ಕ್ಷೇತ್ರದ ಪ್ರದೇಶವನ್ನು 2 ಪಾಲಿಕೆಗೆ ಸೇರ್ಪಡೆಗೊಳಿಸಿರುವ ಕಾರಣ ಶಾಸಕರು ಸಿಟ್ಟಾಗಿದ್ದಾರೆ. ಅದರಲ್ಲೂ ಬಿಬಿಎಂಪಿ ಗಡಿ ಭಾಗದಲ್ಲಿರುವ ಎಂಎಲ್‌ಎಗಳು ತೀವ್ರ ಆಕ್ಷೇಪ ಹೊರಹಾಕಿದ್ದು, ತಮ್ಮ ಕ್ಷೇತ್ರವನ್ನು ಒಂದೇ ಪಾಲಿಕೆಗೆ ಸೇರಿಸಬೇಕು ಇಲ್ಲದಿದ್ದಲ್ಲಿ ಮುಂಬುವ ವಿಧಾನಮಂಡಲದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲಾಗುವುದು. ಇದಕ್ಕೆ ಮನ್ನಣೆ ಸಿಗದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ - 2024’ ವಿಧಾನಮಂಡಲದ ಒಪ್ಪಿಗೆ ಪಡೆಯುವ ಸಂದರ್ಭದಲ್ಲಿ ನಗರದ ಎಲ್ಲ ಶಾಸಕರು ಇಡೀ ವಿಧಾನಸಭಾ ಕ್ಷೇತ್ರವನ್ನು ಒಂದು ಪಾಲಿಕೆ ಅಡಿ ಬರುವಂತೆ ಹೊಸ ಪಾಲಿಕೆ ರಚಿಸುವಂತೆ ಸಲಹೆ ನೀಡಿದ್ದರು. ಆಡಳಿತ ಹಾಗೂ ಪ್ರತಿಪಕ್ಷ ಶಾಸಕರ ಸಲಹೆಗೆ ಸರ್ಕಾರ ಕೂಡ ಸಹಮತ ವ್ಯಕ್ತಪಡಿಸಿತ್ತು. ಆದರೀಗ 5 ಹೊಸ ಪಾಲಿಕೆ ರಚನೆಯ ಕರಡು ಹೊರಬಿದಿದ್ದು, 6 ವಿಧಾನಸಭಾ ಕ್ಷೇತ್ರಗಳನ್ನು ಒಂದಕ್ಕಿಂತ ಹೆಚ್ಚಿನ ಪಾಲಿಕೆ ವ್ಯಾಪ್ತಿಗೆ ತಂದಿರುವುದು ಜನಪ್ರತಿನಿಧಿಗಳಿಗೆ ಹೊಸ ತಲೆಬೇನೆ ಶುರುವಾದಂತಾಗಿದೆ.
ಆಕ್ಷೇಪಣೆ ಸಲ್ಲಿಕೆಗೆ ಸಿದ್ಧತೆ:
ಸದ್ಯ ಹೊರಡಿಸಿರುವ ಅಧಿಸೂಚನೆ ಕರಡು ಪ್ರಸ್ತಾಪ ಆಗಿರುವುದರಿಂದ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಈ ಅವಕಾಶವನ್ನು ಬಳಸಿಕೊಂಡು ದಾಸರಹಳ್ಳಿ, ರಾಜರಾಜೇಶ್ವರಿನಗರ, ಯಶವಂತಪುರ, ಪದ್ಮನಾಭನಗರ, ಮಹದೇವಪುರ ಹಾಗೂ ಪುಲಿಕೇಶಿನಗರ ಕ್ಷೇತ್ರದ ಶಾಸಕರು ತಮ್ಮ ಕ್ಷೇತ್ರವನ್ನು ಒಂದೇ ಪಾಲಿಕೆ ಅಡಿ ತರುವಂತೆ ಆಕ್ಷೇಪಣೆ ಸಲ್ಲಿಸಲು ಮುಂದಾಗಿದ್ದಾರೆ. ಇದಕ್ಕೆ ಸ್ಥಳೀಯ ಜನರಿಂದಲೂ ಅಬ್ಜೆಕ್ಷನ್ ಹಾಕಿಸಲು ಚಾಲನೆ ನೀಡಲಾಗಿದೆ. ವಿಶೇಷವೆಂದರೆ ಆರು ಶಾಸಕರ ಪೈಕಿ ಐವರು ಬಿಜೆಪಿಗೆ ಸೇರಿದ್ದು, ಒಬ್ಬರು ಕಾಂಗ್ರೆಸ್ ಎಂಎಲ್‌ಎ ಆಗಿದ್ದಾರೆ.
ಅಧಿವೇಶನದಲ್ಲಿ ಪ್ರಸ್ತಾಪ:
ಹೊಸ ಪಾಲಿಕೆ ರಚಿಸುವ ವೇಳೆ ವಿಧಾನಸಭಾ ಕ್ಷೇತ್ರದ ಪ್ರದೇಶವನ್ನು ಇಡಿಯಾಗಿ ಸೇರ್ಪಡೆ ಮಾಡದಿರುವುದಕ್ಕೆ ಶಾಸಕರು ಸಹಮತ ವ್ಯಕ್ತಪಡಿಸಿಲ್ಲ. ಈ ಹಿಂದೆಯೇ ಸರ್ಕಾರಕ್ಕೆ ಮನವಿ ಮಾಡಿದ್ದರೂ, ಕರಡು ಅಧಿಸೂಚನೆ ಹೊರಡಿಸುವಾಗ ಏಕೆ ಈ ತಪ್ಪು ಆಗಿದೆ ಎಂಬುದು ತಿಳಿದಿಲ್ಲ. ಒಂದು ವೇಳೆ ಬೇಕಂತಲೇ ಈ ಪ್ರಮಾಣದ ಮಾಡಿದ್ದಲ್ಲಿ ಅದನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರಿಪಡಿಸಲು ಒತ್ತಾಯ ಮಾಡುತ್ತೇವೆ ಎಂದು ಶಾಸಕರು ಪ್ರತಿಕ್ರಿಯಿಸಿದ್ದಾರೆ.
ಶಾಸಕರ ತಗಾದೆ ಏಕೆ?:
ಒಂದೇ ಪಾಲಿಕೆ ವ್ಯಾಪ್ತಿಯಲ್ಲಿ ವಿಧಾನಸಭಾ ಕ್ಷೇತ್ರವೊಂದರ ಎಲ್ಲ ಪ್ರದೇಶಗಳು ಸೇರಿದ್ದಲ್ಲಿ ಕಾರ್ಯನಿರ್ವಹಣೆ ಸುಲಭವಾಗಲಿದೆ. ಎಂಎಲ್‌ಎ ಫಂಡ್, ಅಭಿವೃದ್ಧಿ ಕಾರ್ಯ, ಜನಸಂಪರ್ಕ, ಅಧಿಕಾರಿಗಳೊಂದಿಗೆ ಸಮನ್ವಯ ಸಾಧ್ಯವಾಗಲಿದೆ. ಒಂದು ವೇಳೆ ಹೆಚ್ಚು ಪಾಲಿಕೆಗೆ ಕ್ಷೇತ್ರದ ಪ್ರದೇಶ ಸೇರ್ಪಡೆಯಾದಲ್ಲಿ ಮೇಯರ್/ ಅಧಿಕಾರಿಗಳನ್ನು ಸಂಪರ್ಕಿಸಲು ಕಷ್ಟವಾಗಲಿದೆ. ಸಭೆಗಳಿಗೆ ತೆರಳಲು ಸಮಯದ ಅಭಾವ ಉಂಟಾಗಲಿದೆ. ಮುಖ್ಯವಾಗಿ ಕ್ಷೇತ್ರದ ಮತದಾರರು ಒಂದೇ ಪಾಲಿಕೆ ವ್ಯಾಪ್ತಿಯಲ್ಲಿದ್ದಾಗ ಶಾಸಕರು ಸದಾ ಲಭ್ಯರಿರುತ್ತಾರೆ. ಬೇರೆ ಪಾಲಿಕೆಗಳಡಿ ಕ್ಷೇತ್ರದ ಪ್ರದೇಶ ಹಂಚಿಹೋದಲ್ಲಿ ಜನರೊಂದಿಗೆ ಸಂಪರ್ಕ ಕಷ್ಟವಾಗಲಿದೆ. ಆಗ ಎಂಎಲ್‌ಎ ಕಾರ್ಯವೈಖರಿ ಬಗ್ಗೆಯೇ ಅಸಮಾಧಾನ ಏಳುವ ಸಾಧ್ಯತೆ ಇದೆ ಎಂಬುದಾಗಿ ನಗರದ ಶಾಸಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಕೂಡ್ಲು ವಾರ್ಡ್‌ಗೆ ಕೊಕ್:
ಬೆಂಗಳೂರು ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. ಬಿಬಿಎಂಪಿಯ 198 ವಾರ್ಡ್ ರಚಿಸಿದಾಗ ಆನೇಕಲ್ ಕ್ಷೇತ್ರದ ಕೂಡ್ಲು ವಾರ್ಡ್ ಮಾತ್ರ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಈ ಒಂದು ವಾರ್ಡ್ ಸೇರ್ಪಡೆಯಿಂದಾಗಿ ಅಲ್ಲಿನ ಶಾಸಕರಿಗೆ ಬಿಬಿಎಮಪಿ ಸಭೆಗಳಲ್ಲಿ ಪಾಲ್ಗೊಳ್ಳಲು ಅವಕಾಶ/ಮತದಾನದ ಹಕ್ಕು ಇತ್ತು. ಜತೆಗೆ ಅನುದಾನ ಕೂಡ ನೀಡಲಾಗುತ್ತಿತ್ತು. ಇದಕ್ಕೆ ಹಿಂದಿನಿಂದಲೂ ಆಕ್ಷೇಪ ಇತ್ತು. ಈಗ ಜಿಬಿಎ ಅಸ್ತಿತ್ವಕ್ಕೆ ಬಂದಿರುವುದರಿಂದ ಕೂಡ್ಲು ವಾರ್ಡ್‌ಅನ್ನು ಕೈಬಿಡಲಾಗಿದೆ. ಹೀಗಾಗಿ ಇನ್ನು ಮುಂದೆ ಜಿಬಿಎ (ಬಿಬಿಎಂಪಿ) ವ್ಯಾಪ್ತಿಯಲ್ಲಿ 27 ಕ್ಷೇತ್ರಗಳು ಇರುತ್ತವೆ.
5 ಪಾಲಿಕೆಗಳ ವಿಸ್ತೀರ್ಣ, ಜನಸಂಖ್ಯೆ ವಿವರ:
ಬೆಂಗಳೂರು ಉತ್ತರ:
ವಿಸ್ತೀರ್ಣ - 158 ಚ. ಕಿ.ಮೀ.
ಜನಸಂಖ್ಯೆ - 31 ಲಕ್ಷ (2023)
ಜನಸಂಖ್ಯೆ ಸಾಂದ್ರತೆ - 19,620 ಪ್ರತಿ ಚ. ಕಿ.ಮೀ.ಗೆ
ಬೆಂಗಳೂರು ದಕ್ಷಿಣ:
ವಿಸ್ತೀರ್ಣ - 147 ಚ. ಕಿ.ಮೀ.
ಜನಸಂಖ್ಯೆ - 30 ಲಕ್ಷ (2023)
ಜನಸಂಖ್ಯೆ ಸಾಂದ್ರತೆ - 20,408 ಪ್ರತಿ ಚ. ಕಿ.ಮೀ.ಗೆ
ಬೆಂಗಳೂರು ಪೂರ್ವ:
ವಿಸ್ತೀರ್ಣ - 168 ಚ. ಕಿ.ಮೀ.
ಜನಸಂಖ್ಯೆ - 13 ಲಕ್ಷ (2023)
ಜನಸಂಖ್ಯೆ ಸಾಂದ್ರತೆ - 7,738 ಪ್ರತಿ ಚ. ಕಿ.ಮೀ.ಗೆ
ಬೆಂಗಳೂರು ಪಶ್ಚಿಮ:
ವಿಸ್ತೀರ್ಣ - 161 ಚ. ಕಿ.ಮೀ.
ಜನಸಂಖ್ಯೆ - 45 ಲಕ್ಷ (2023)
ಜನಸಂಖ್ಯೆ ಸಾಂದ್ರತೆ - 27,950 ಪ್ರತಿ ಚ. ಕಿ.ಮೀ.ಗೆ
ಬೆಂಗಳೂರು ಕೇಂದ್ರ:
ವಿಸ್ತೀರ್ಣ - 78 ಚ. ಕಿ.ಮೀ.
ಜನಸಂಖ್ಯೆ - 25 ಲಕ್ಷ (2023)
ಜನಸಂಖ್ಯೆ ಸಾಂದ್ರತೆ - 32,051 ಪ್ರತಿ ಚ. ಕಿ.ಮೀ.ಗೆ
ನಾನು ಪ್ರತಿನಿಧಿಸುವ ದಾಸರಹಳ್ಳಿ ಕ್ಷೇತ್ರವನ್ನು ಉತ್ತರ ಹಾಗೂ ಪಶ್ಚಿಮ ಪಾಲಿಕೆ ವ್ಯಾಪ್ತಿಗೆ ಸೇರಿಸಲಾಗಿದೆ. ಸರ್ಕಾರದ ಈ ನಡೆ ತಪ್ಪು. ಬಹುಶಃ ಚುನಾವಣೆ ಮುಂದೂಡಲು ದೂರಾಲೋಚನೆ ಇರಬಹುದು. ಹಿಂದಿನಿಂದಲೂ ನಮ್ಮ ಪಕ್ಷ ಗ್ರೇಟರ್ ಬೆಂಗಳೂರಿಗೆ ಒಬ್ಬ ಮೇಯರ್ ಪೂರ್ಣಾವಧಿಗೆ ಇದ್ದು, ವಲಯ ಮಟ್ಟದಲ್ಲಿ ಐಎಎಸ್ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವಂತೆ ತಿಳಿಸಿದ್ದೆವು. ಇದನ್ನು ಪರಿಗಣಿಸದೆ ಅವೈಜ್ಞಾನಿಕವಾಗಿ ವಿಭಜನೆ ಮಾಡಲಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ದನಿ ಎತ್ತಲಿದ್ದೇವೆ. ಕೋರ್ಟ್‌ನಲ್ಲೂ ಪ್ರಶ್ನಿಸಲು ಚಿಂತನೆ ನಡೆಸಲಾಗುವುದು.
- ಎಸ್. ಮುನಿರಾಜ್, ದಾಸರಹಳ್ಳಿ ಕ್ಷೇತ್ರದ ಶಾಸಕ
ವಿಧಾನಸಭಾ ಕ್ಷೇತ್ರದ ಪೂರ್ಣ ಪ್ರದೇಶ ಒಂದೇ ಪಾಲಿಕೆಗೆ ಸೇರ್ಪಡೆ ಮಾಡಿದರೆ ಉತ್ತಮ. ಇದರಿಂದ ಶಾಸಕರು, ಜನರಿಗೆ ಹೆಚ್ಚಿನ ಅನುಕೂಲ ಇರಲಿದೆ. ನನ್ನ ಕ್ಷೇತ್ರದಲ್ಲಿ ಕುಶಾಲನಗರ ವಾರ್ಡ್ ಅನ್ನು ಒಂದು ಪಾಲಿಕೆಗೆ ಉಳಿದ ಏರಿಯಾವನ್ನು ಪೂರ್ವ ಪಾಲಿಕೆಗೆ ಸೇರಿಸಲಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ತಪ್ಪು ಸರಿಪಡಿಸುವ ಯತ್ನ ಮಾಡಲಾಗುವುದು.
- ಎ.ಸಿ.ಶ್ರೀನಿವಾಸ್, ಪುಲಿಕೇಶಿನಗರ ಕ್ಷೇತ್ರದ ಶಾಸಕ
ರಾಜ್ಯ ಸರ್ಕಾರಕ್ಕೆ ನಗರದ ಬಗ್ಗೆ ಕಾಳಜಿ ಇಲ್ಲ. ಜನರ ತೆರಿಗೆ ಹಣವನ್ನು ಕೊಳ್ಳೆ ಹೊಡೆಯಲಾಗುತ್ತಿದೆಯೆ ಹೊರತು ಅಭಿವೃದ್ಧಿ ಮಾಡುತ್ತಿಲ್ಲ. ಕೋರ್ಟ್ ಛೀಮಾರಿಯಿಂದ ತಪ್ಪಿಸಿಕೊಳ್ಳಲು ಚುನಾವಣೆ ನೆಪ ಹೇಳಲಾಗುತ್ತಿದೆ. ಎಲೆಕ್ಷನ್ ನಡೆದರೆ ಐದೂ ಪಾಲಿಕೆಗಳಲ್ಲಿ ಬಿಜೆಪಿ/ಜೆಡಿಎಸ್ ಅಧಿಕಾರ ಹಿಡಿಯುವ ಭೀತಿ ಆಡಳಿತ ಪಕ್ಷಕ್ಕಿದೆ. ಹಾಗಾಗಿ ಬಿಬಿಎಂಪಿ ವಿಭಜಿಸುವ ನೆಪ ಮಾಡಿ ಗ್ರೇಟರ್ ಬೆಂಗಳೂರು ಅಧಿಸೂಚನೆ ಹೊರಡಿಸಲಾಗಿದೆ. ಇದರ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ತಪ್ಪು ಸರಿಪಡಿಸಲು ಒತ್ತಾಯಿಸುತ್ತೇವೆ.
- ಟಿ.ಎ.ಶರವಣ, ವಿಧಾನಪರಿಷತ್ ಸದಸ್ಯ
1ಕ್ಕಿಂತ ಹೆಚ್ಚು ಪಾಲಿಕೆಗೆ ಸೇರಿಸಿರುವ ಕ್ಷೇತ್ರದ ವಿವರ:
ದಾಸರಹಳ್ಳಿ ಕ್ಷೇತ್ರ: ಚೊಕ್ಕಸಂದ್ರ, ಹೆಗ್ಗನಹಳ್ಳಿ, ರಾಜಗೋಪಾಲನಗರ ವಾರ್ಡ್‌ಗಳು (ಪಶ್ಚಿಮ ಪಾಲಿಕೆ), ಶೆಟ್ಟಿಹಳ್ಳಿ, ಬಾಗಲಗುಂಟೆ, ಮಲ್ಲಸಂದ್ರ, ಟಿ.ದಾಸರಹಳ್ಳಿ ವಾರ್ಡ್‌ಗಳು (ಉತ್ತರ ಪಾಲಿಕೆ), ಹೆಮ್ಮಿಗೆಪುರ ವಾರ್ಡ್‌ನ ಕೆಲ ಭಾಗ (ದಕ್ಷಿಣ ಪಾಲಿಕೆ).
ಆರ್‌ಆರ್‌ನಗರ ಕ್ಷೇತ್ರ: ಲಗ್ಗೆರೆ, ಕೊಟ್ಟಿಗೆಪಾಳ್ಯ, ಲಕ್ಷ್ಮೀದೇವಿನಗರ, ಎಚ್‌ಎಂಟಿ, ಜ್ಞಾನಭಾರತಿ ವಾರ್ಡ್‌ಗಳು (ಪಶ್ಚಿಮ ಪಾಲಿಕೆ), ಜೆ.ಪಿ.ಪಾರ್ಕ್, ಜಾಲಹಳ್ಳಿ, ಯಶವಂತಪುರ ವಾರ್ಡ್‌ಗಳು (ಉತ್ತರ ಪಾಲಿಕೆ).
ಯಶವಂತಪುರ ಕ್ಷೇತ್ರ: ಹೆಮ್ಮಿಗೆಪುರ ವಾರ್ಡ್‌ನ ಹೆಚ್ಚಿನ ಭಾಗ ಪಶ್ಚಿಮ ಪಾಲಿಕೆಗೆ ಹಾಗೂ ಇದೇ ವಾರ್ಡ್‌ನ ಕೆಲ ಭಾಗ ದಕ್ಷಿಣ ಪಾಲಿಕೆಗೆ.
ಪದ್ಮನಾಭನಗರ ಕ್ಷೇತ್ರ: ಹೊಸಕೆರೆಹಳ್ಳಿ, ಕರಿಸಂದ್ರ, ಗಣೇಶಮಂದಿರ, ಯಡಿಯೂರು ವಾರ್ಡ್‌ಗಳು (ಪಶ್ಚಿಮ ಪಾಲಿಕೆ). ಕುಮಾರಸ್ವಾಮಿ ಲೇಔಟ್, ಬನಶಂಕರಿ ದೇವಸ್ಥಾನ, ಚಿಕ್ಕಲ್ಲಸಂದ್ರ ವಾರ್ಡ್ (ದಕ್ಷಿಣ ಪಾಲಿಕೆ).
ಮಹದೇವಪುರ ಕ್ಷೇತ್ರ: ಬೆಳ್ಳಂದೂರು ವಾರ್ಡ್ ದಕ್ಷಿಣ ಪಾಲಿಕೆಗೆ ಉಳಿದವು ಪೂರ್ವ ಪಾಲಿಕೆಗೆ ಸೇರ್ಪಡೆ.
ಪುಲಿಕೇಶಿನಗರ ಕ್ಷೇತ್ರ: ಕುಶಾಲ್‌ನಗರ ವಾರ್ಡ್ ಕೇಂದ್ರ ಪಾಲಿಕೆಗೆ ಉಳಿದವು ಉತ್ತರ ಪಾಲಿಕೆಗೆ ಸೇರ್ಪಡೆ.
ಯಾವ ಕ್ಷೇತ್ರ ಯಾವ ಪಾಲಿಕೆ ವ್ಯಾಪ್ತಿಗೆ?:
ಬೆಂಗಳೂರು ಉತ್ತರ: ಯಲಹಂಕ, ಬ್ಯಾಟರಾಯನಪುರ, ಹೆಬ್ಬಾಳ, ಸರ್ವಜ್ಞನಗರ, ಪುಲಿಕೇಶಿನಗರ (ಕುಶಾಲನಗರ ವಾರ್ಡ್ ಹೊರತುಪಡಿಸಿ), ದಾಸರಹಳ್ಳಿ ಕ್ಷೇತ್ರದ ಶೆಟ್ಟಿಹಳ್ಳಿ, ಬಾಗಲಗುಂಟೆ, ಮಲ್ಲಸಂದ್ರ, ಟಿ.ದಾಸರಹಳ್ಳಿ ವಾರ್ಡ್‌ಗಳು, ಆರ್.ಆರ್.ನಗರ ಕ್ಷೇತ್ರದ ಜೆ.ಪಿ.ಪಾರ್ಕ್, ಯಶವಂತಪುರ ಹಾಗೂ ಜಾಲಹಳ್ಳಿ ವಾರ್ಡ್‌ಗಳು.
ಬೆಂಗಳೂರು ದಕ್ಷಿಣ: ಜಯನಗರ, ಬಿಟಿಎಂ ಲೇಔಟ್, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಪದ್ಮನಾಭನಗರ ಕ್ಷೇತ್ರದ ಕುಮಾರಸ್ವಾಮಿ ಲೇಔಟ್, ಬನಶಂಕರಿ ದೇವಸ್ಥಾನ, ಪದ್ಮನಾಭನಗರ, ಚಿಕ್ಕಲ್ಲಸಂದ್ರ ವಾರ್ಡ್‌ಗಳು, ಮಹದೇವಪುರ ಕ್ಷೇತ್ರದ ಬೆಳ್ಳಂದೂರು ವಾರ್ಡ್, ಯಶವಂತಪುರ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್‌ನ ಕೆಲ ಪ್ರದೇಶ ಹಾಗೂ ಆರ್.ಆರ್.ನಗರ ಕ್ಷೇತ್ರದ ಕೆಲ ಪ್ರದೇಶ.
ಬೆಂಗಳೂರು ಪೂರ್ವ: ಕೆ.ಆರ್.ಪುರ ಹಾಗೂ ಮಹದೇವಪುರ (ಬೆಳ್ಳಂದೂರು ವಾರ್ಡ್ ಹೊರತುಪಡಿಸಿ).
ಬೆಂಗಳೂರು ಪಶ್ಚಿಮ: ಗೋವಿಂದರಾಜನಗರ, ವಿಜಯನಗರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ರಾಜಾಜಿನಗರ, ಬಸವನಗುಡಿ, ಆರ್.ಆರ್.ನಗರ ಕ್ಷೇತ್ರದ ಲಗ್ಗೆರೆ, ಕೊಟ್ಟಿಗೆಪಾಳ್ಯ, ಲಕ್ಷ್ಮೀದೇವಿನಗರ, ಎಚ್‌ಎಂಟಿ, ಜ್ಞಾನಭಾರತಿ ಹಾಗೂ ಆರ್.ಆರ್.ನಗರ ವಾರ್ಡ್‌ನ ಕೆಲ ಭಾಗಗಳು, ಯಶವಂತಪುರ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್‌ನ ಕೆಲ ಭಾಗಗಳು, ಪದ್ಮನಾಭನಗರ ಕ್ಷೇತ್ರದ ಹೊಸಕೆರೆಹಳ್ಳಿ, ಕರಿಸಂದ್ರ, ಗಣೇಶಮಂದಿರ, ಯಡಿಯೂರು ವಾರ್ಡ್‌ಗಳು.
ಬೆಂಗಳೂರು ಕೇಂದ್ರ: ಗಾಂಧಿನಗರ, ಚಿಕ್ಕಪೇಟೆ, ಶಿವಾಜಿನಗರ, ಚಾಮರಾಜಪೇಟೆ, ಶಾಂತಿನಗರ, ಸಿ.ವಿ.ರಾಮನ್‌ನಗರ ಹಾಗೂ ಪುಲಿಕೇಶಿನಗರದ ಕುಶಾಲನಗರ ವಾರ್ಡ್.