ಶಾಸಕರಿಂದ ಕಾನೂನುಬಾಹಿರ ಚಟುವಟಿಕೆಗೆ ಕುಮ್ಮಕ್ಕು

MLAs abet illegal activities
ಇಳಕಲ್ಲ ಸಮರ್ಪಕ ನೀರಿನ ಪೂರೈಕೆಗೆ ಆಗ್ರಹಿಸಿ ನಗರಸಭೆ ಕಾರ್ಯಾಲಯದ ಮುಂದೆ ಸಾರ್ವಜನಿಕರು ಪ್ರತಿಭಟನೆಯನ್ನು ನಡೆಸಿದರು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಅರವಿಂದ ಮಂಗಳೂರ, ಶೋಭಾ ಆಮದಿಹಾಳ, ವೆಂಕಟೇಶ ಪೋತಾ, ಶ್ಯಾಮಸುಂದರ ಕರವಾ, ಮಂಜುನಾಥ ಹೊಸಮನಿ ಮತ್ತಿತರರಿದ್ದರು.
Published on

ಇಳಕಲ್ಲ(ಗ್ರಾ): ನಗರದ ಎಲ್ಲ 31 ವಾರ್ಡ್‌ಗಳ ಬದಲಾಗಿ ಕೇವಲ 23 ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡುವ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಅವರ ಹಿಂಬಾಲಕರು ನೇರ ಕಾರಣ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಕಿಡಿ ಕಾರಿದರು.

ನಗರದಲ್ಲಿ ಸಮರ್ಪಕ ನೀರಿನ ಪೂರೈಕೆಗೆ ಆಗ್ರಹಿಸಿ ಮಂಗಳವಾರ ಆಯೊಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿಂದೆ ನಾವು ಮಾಡಿದ ಕಾರ್ಯಗಳನ್ನೇ ಪುನ ಭೂಮಿಪೂಜೆ ನೆರವೇರಿಸುವ ಶಾಸಕರು ಕ್ಷೇತ್ರದ ಮೂಲ ಅಭಿವೃದ್ಧಿಯನ್ನೇ ಮರೆತು ಕೇವಲ ಕಾನೂನುಬಾಹಿರ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಎರಡೂ ತಾಲೂಕುಗಳಲ್ಲಿ ಬೇರೆ ಬೇರೆ ದಂಧೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಗಾಂಜಾ, ಹೆರಾಯಿನ್ ಸೇವಿಸಲು ಮತ್ತು ಐಪಿಎಲ್ ಜೂಜಾಟಕ್ಕೆ ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆಪಾದಿಸಿದರು.

ಪಟ್ಟಣದ ಜೂನಿಯರ್ ಕಾಲೇಜು ಸಮೀಪದ ಟ್ಯಾಂಕ್ ನಿರ್ಮಾಣ ಸ್ಥಳದಿಂದ ಪ್ರತಿಭಟನಾ ಮೆರವಣಿಗೆ ಕೆಇಬಿ, ಬನ್ನಿಕಟ್ಟಿ, ಸರ್ಕಾರಿ 10ನೇ ನಂಬರ್ ಶಾಲೆ, ಮಹಾಂತೇಶ ಚಿತ್ರಮಂದಿರ, ಸುಭಾಷ್ ರಸ್ತೆ, ಸುವರ್ಣ ರಂಗಮಂದಿರ, ಅರಳಿಕಟ್ಟಿ ಅವರ ಮನೆ, ಗಣೇಶ ಭವನ ಕಂಠಿ ಸರ್ಕಲ್ ಮಾರ್ಗವಾಗಿ ನಗರಸಭೆ ಕಚೇರಿಯ ಮುಂದೆ ಪ್ರತಿಭಟನಾಕಾರರು ಆಗಮಿಸಿದರು. ಮಹಿಳೆಯರು ಖಾಲಿ ಕೊಡಗಳನ್ನು ತಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಗರ ಘಟಕ ಅಧ್ಯಕ್ಷ ಅರವಿಂದ ಮಂಗಳೂರ, ನಗರಸಭೆ ಮಾಜಿ ಅಧ್ಯಕ್ಷೆ ಶೋಭಾ ಆಮದಿಹಾಳ, ವೆಂಕಟೇಶ ಪೋತಾ, ಶ್ಯಾಮಸುಂದರ ಕರವಾ, ಮಂಜುನಾಥ ಹೊಸಮನಿ, ತೃಪ್ತಿ ಸಾಲಿಮಠ, ಅಶೋಕ ಶ್ಯಾವಿ, ವೀರೇಶ ಹಿರೇಮನಿ, ಮಲ್ಲು ಕುಂಬಾರ, ನಗರಸಭೆಯ ಬಿಜೆಪಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ ಗುರಂ ಅವರು ಮನವಿಪತ್ರವನ್ನು ನಗರಸಭೆ ವ್ಯವಸ್ಥಾಪಕ ಚನ್ನಬಸನಗೌಡ ಅವರಿಗೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net