ಸರ್ಕಾರದ ವಿರುದ್ಧ ಶಾಸಕ ಮಂಜು ಆರೋಪ

17. KR Pete 1
Published on
  • ಕೆ.ಆರ್.ಪೇಟೆ : ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಲೋಕನಹಳ್ಳಿ, ಮಾವಿನಕಟ್ಟೆ ಕೊಪ್ಪಲು ಮುಂತಾದ ಕೆರೆಗಳು
    ಅತಿವೃಷ್ಠಿಯಿಂದ ಹಾನಿಗೀಡಾಗಿ 3 ವರ್ಷ ಕಳೆದಿದ್ದರೂ ಇದುವರೆಗೂ ರಾಜ್ಯ ಸರ್ಕಾರದುರಸ್ತಿಗೆ ಮುಂದಾಗಿಲ್ಲ ಎಂದು ಶಾಸಕ ಎಚ್.ಟಿ. ಮಂಜು ದೂರಿದರು. ಜೆಡಿಎಸ್ ಮುಖಂಡರೊಂದಿಗೆ ಅವರು ಮಾವಿನಕಟ್ಟೆ ಕೊಪ್ಪಲು ಕೆರೆ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ, ದುಸ್ಥಿತಿ ಪರಿಶೀಲಿಸಿ ಮಾತನಾಡಿದರು.
    2021 ರಲ್ಲಿ ಕ್ಷೇತ್ರದಲ್ಲಿ ಬಿದ್ದ ಭಾರೀ ಮಳೆಗೆ ತಾಲೂಕಿನ ಹಲವು ಕೆರೆಗಳು, ರಸ್ತೆ ಮತ್ತು ಸೇತುವೆಗಳು ಹಾನಿಗೀಡಾಗಿದ್ದವು. ಸಂತೇಬಾಚಹಳ್ಳಿ, ದೊಡ್ಡಕ್ಯಾತನಹಳ್ಳಿ ಮುಂತಾದ ಕೆರೆಗಳನ್ನು ಆ ಸಂದರ್ಭ ದುರಸ್ತಿ ಮಾಡಲಾಯಿತು. ಆದರೆ ಲೋಕನಹಳ್ಳಿ, ಮಾವಿನಕಟ್ಟೆ ಕೊಪ್ಪಲು ಗ್ರಾಮಗಳಲ್ಲಿ ಒಡೆದು ಹೋದ ಕೆರೆಗಳನ್ನು ಇದುವರೆಗೂ ಅಭಿವೃದ್ಧಿ ಪಡಿಸಿಲ್ಲ.
    ತಾಲೂಕಿನಲ್ಲಿ ಈಗ ಉತ್ತಮ ಮಳೆಯಾಗುತ್ತಿದೆ. ಆದರೆ ಒಡೆದು ಹೋಗಿರುವ ಕೆರೆಗಳಲ್ಲಿ ನೀರು ನಿಲ್ಲುತ್ತಿಲ್ಲ. ಕೆರೆ ಕಟ್ಟೆಗಳನ್ನು ತಕ್ಷಣವೇ ದುರಸ್ಥಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ನಾನು ಶಾಸಕನಾದ ಆರಂಭದಿಂದಲೂ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಒತ್ತಾಯ ಮಾಡುತ್ತಲೇ ಬಂದಿದ್ದೇನೆ. ಕೆರೆ ಏರಿ ದುರಸ್ತಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು, ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಇಂಜಿನಿಯರ್, ಮುಖ್ಯ ಇಂಜಿನಿಯರ್,
    ಜಿಲ್ಲಾಧಿಕಾರಿ ಮತ್ತು ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಪತ್ರ ಬರೆದು ಮನವಿ ಮಾಡಿದ್ದೇನೆ
    ಇದಕ್ಕೆ ಯಾರೊಬ್ಬರೂ ಸ್ಪಂದಿಸಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ಮುಖತಃ ಭೇಟಿ ಮಾಡಿ ವಿನಂತಿ ಮಾಡಿದ್ದೇನೆ. ಇದಕ್ಕೂ ಸರ್ಕಾರ ಸ್ಪಂದಿಸದಿದ್ದಲ್ಲಿ ಅನಿವಾರ್ಯವಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶೀಘ್ರದಲ್ಲಿಯೇ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಮಂಜು ಎಚ್ಚರಿಸಿದರು.

ಕೆರೆಗಳ ದುರಸ್ತಿ ಕಾರ್ಯ ವಿಳಂಬ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net