ಶ್ರೀರಂಗಪಟ್ಟಣ: ಐತಿಹಾಸಿಕ ಶ್ರೀರಂಗಪಟ್ಟಣದ ಕೋಟೆ, ಕೊತ್ತಲ ಹಾಗೂ ಪಾರಂಪರಿಕ ಸ್ಮಾರಕಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ದಿಪಡಿಸಲಾಗುವುದು ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.ಪಟ್ಟಣದಲ್ಲಿ ಪುರಾತತ್ವ ಇಲಾಖೆ ಮೈಸೂರು ವಿಭಾಗದ ಆಯುಕ್ತ ದೇವರಾಜ್ ಹಾಗೂ ಪುರಾತತ್ವ ಸಂರಕ್ಷಣಾ ವಿಭಾಗದ ಎಇಇ ಪುಟ್ಟಸ್ವಾಮಿ ಅವರೊಂದಿಗೆ ಪುರಸಭೆ ಹಿಂಭಾಗದಲ್ಲಿನ ಕೋಟೆ-ಕಂದಕಗಳು, ಕಾವೇರಿ ನದಿಯ ಸ್ನಾನಘಟ್ಟ ಸೇರಿದಂತೆ ವಿವಿಧೆಡೆ ತೆರಳಿ ಪ್ರಸ್ತುತ ಸ್ಥಿತಿ- ಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.ಪಟ್ಟಣಕ್ಕೆ ದೇಶಿ-ವಿದೇಶಿ ಪ್ರವಾಸಿಗರನ್ನು ಸೆಳೆಯುವ ವ ನಿಟ್ಟಿನಲ್ಲಿ ಬಹು ಉದ್ದೇಶದಿಂದ ಈ ಹಿಂದೆ ಆರಂಭಿಸಿದ್ದ ಧ್ವನಿ ಮತ್ತು ಬೆಳಕು ವಿಶೇಷ ಪ್ರದರ್ಶನ ನಿಂತು ಹೋಗಿದೆ. ಪಟ್ಟಣದ ಸುತ್ತ ಇರುವ ಕೋಟೆಯು ಹಲವೆಡೆ ಕುಸಿತಗೊಂಡಿದೆ. ನದಿಯ ಸ್ನಾನಘಟ್ಟಗಳು ಅವ್ಯವಸ್ಥೆ ತಾಣವಾಗಿವೆ. ಕಂದಕಗಳಲ್ಲಿ ತುಂಬಿದ ತ್ಯಾಜ್ಯ ವಿಲೇವಾರಿ ಆಗಬೇಕು. ಗಿಡಗಂಟಿಗಳನ್ನು ತೆರವು ಗೊಳಿಸಬೇಕು. ಇದಕ್ಕಾಗಿ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಶೀಘ್ರವೇ ಈ ತಾಣಗಳ ಸಮಗ್ರ ಅಭಿವೃದ್ಧಿಗೆ ಅನುದಾನ ತರಲು ಕ್ರಮ ವಹಿಸುವೆ ಎಂದರು.