

ವಿಜಯಪುರ: ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜ, ಹಿಂದುಗಳ ಆರಾಧಕ ಗಣೇಶ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಭಾವಚಿತ್ರವುಳ್ಳ ಬ್ಯಾನರ್ ಹರಿದ ಕಿಡಿಗೇಡಿಗಳನ್ನು ಗುಂಡಾ ಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿ ಯತ್ನಾಳ ಬೆಂಬಲಿಗರು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದ ಮುಖಂಡರು ಕೃತ್ಯ ಖಂಡಿಸಿ ಘೋಷಣೆ ಮೊಳಗಿಸಿದರು. ಯತ್ನಾಳ ಪರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪರ ಘೋಷಣೆ ಕೂಗಿದರು. ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಗಣೇಶೋತ್ಸವದ ಹಿನ್ನೆಲೆ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದ ಬಳಿ ಬೃಹತ್ ಕಟೌಟ್ ಅಳವಡಿಸಲಾಗಿತ್ತು. ಅದರಲ್ಲಿ ಹಿಂದುಗಳ ಆರಾಧಕ ಗಣೇಶ, ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಶಾಸಕ ಯತ್ನಾಳ ಅವರ ಭಾವಚಿತ್ರವಿತ್ತು. ಈದ್ ಮಿಲಾದ್ ಮೆರವಣಿಗೆ ವೇಳೆ ಯಾರೋ ಕೆಲವು ಕಿಡಿಗೇಡಿಗಳು ಬ್ಯಾನರ್ ಹರಿದು ವಿಕೃತಿ ಮೆರೆದಿದ್ದಾರೆ. ಹಾಡಹಗಲೇ ಇಂಥ ಕೃತ್ಯ ನಡೆದಿದ್ದು, ಘಟನೆಯ ದೃಶ್ಯಾವಳಿಗಳು ಕೂಡ ಹರಿದಾಡುತ್ತಿವೆ. ಈಗಾಗಲೇ ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿದೆ. ಹೀಗಾಗಿ ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಹೆಚ್ಚಿ ಗುಂಡಾ ಕಾಯ್ದೆಯಡಿ ಬಂಧಿಸಬೇಕೆಂದು ಒತ್ತಾಯಿಸಿದರಲ್ಲದೇ, ಕೋಮುಗಲಭೆ ಎಬ್ಬಿಸಲು ಯತ್ನಿಸಿರುವ ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕೆಂದರು.
ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಎಂ.ಎಸ್. ಕರಡಗಿ, ಆರ್.ಎಸ್.ಕುರಿಯವರ, ಎ.ಎಸ್.ಎಸ್. ಬೆಲ್ಲದ, ಅಶೋಕ ಬೆಲ್ಲದ, ಪರಶುರಾಮ ಹೊಸಪೇಟಿ, ಸಚಿನ ಎಸ್.ಕುಮಶಿ, ವಿಜಯಕುಮಾರ ಬಿರಾದಾರ, ಪ್ರೇಮಾನಂದ ಬಿರಾದಾರ, ಶ್ರೀಶೈಲ ಸಿ.ಕಣಮುಚನಾಳ, ಕಿರಣ ಕೆ. ಪಾಟೀಲ, ಭರತ ಕೋಳಿ ಮತ್ತಿತರರಿದ್ದರು.