ರಾಜೀನಾಮೆ ನೀಡದಿದ್ದಲ್ಲಿ ನಿಷ್ಪಕ್ಷಪಾತ ತನಿಖೆ ಹೇಗೆ ಸಾಧ್ಯ ?

yatnal mla
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಸಿಲುಕಿಕೊಂಡಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ರಾಜೀನಾಮೆ ನೀಡದಿದ್ದಲ್ಲಿ ನಿಷ್ಪಕ್ಷಪಾತ ತನಿಖೆ ಹೇಗೆ ಸಾಧ್ಯ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜೀನಾಮೆ ನೀಡದಿದ್ದಲ್ಲಿ ಮುಡಾ ಅಕ್ರಮದ ಲೋಕಾಯುಕ್ತ ತನಿಖೆ ಬಗ್ಗೆ ಅನುಮಾನ ಮೂಡುತ್ತದೆ. ಪ್ರಾಮಾಣಿಕರಾಗಿದ್ದರೆ ಅವರು ತನಿಖೆಗೆ ಯಾಕೆ ಭಯ ಪಡಬೇಕು ? ಸಾಮಾನ್ಯ ವ್ಯಕ್ತಿಯಂತೆ ತನಿಖೆ ಎದುರಿಸಿ ನಿದೋಷಿಯಾಗಿ ಹೊರಗೆ ಬರಲಿ ಎಂದರು.

ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದ ಹೈ ಕೋರ್ಟ್ ತೀರ್ಪನ್ನು ಪಾಲಿಟಿಕಲ್ ಜಡ್ಜ್​ಮೆಂಟ್ ಎಂದು ಹೇಳಿರುವ ಸಚಿವ ಜಮೀರ್ ಅಹ್ಮದ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ನಮ್ಮ ವಕೀಲರ ಸಲಹೆ ಪಡೆದುಕೊಳ್ಳುತ್ತಿದ್ದೇವೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ನ್ಯಾಯಾಂಗದ ಮೂಲಕ ಹೋರಾಟ ಮಾಡುತ್ತೇವೆ ಎಂದರು.

ಮುಡಾ ಹಗರಣದ ದಾಖಲೆ ನೀಡಿದ್ದು ಕಾಂಗ್ರೆಸ್ ಪಕ್ಷದವರೇ. ಇದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಕೇಳಿ ಬಂದಿತ್ತು. ಕಾಂಗ್ರೆಸ್​ನಲ್ಲಿನ ಒಳಜಗಳ ಇಂದು ಸಿಎಂ ರಾಜೀನಾಮೆ ಪಡೆಯುವ ಹಂತಕ್ಕೆ ಬಂದು ಮುಟ್ಟಿದೆ. ಸಿದ್ದರಾಮಯ್ಯನವರನ್ನು ಮುಗಿಸುವ ಷಡ್ಯಂತ್ರ ಕಾಂಗ್ರೆಸ್​ನಲ್ಲೇ ನಡೆದಿದೆ, ವಿರೋಧ ಪಕ್ಷದಿಂದ ಅಲ್ಲ ಎಂದು ಹೇಳಿದರು.

ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳುತ್ತ ಇದ್ದರು. ಈಗ ಅವರೇ ರಾಜೀನಾಮೆ ನೀಡಿದ್ದಾರೆ. ದೆಹಲಿಯಿಂದ ಒಂದು ಕರೆ ಬರುತ್ತದೆ, ಆಗ ಸಿದ್ದರಾಮಯ್ಯನವರೇ ರಾಜೀನಾಮೆ ನೀಡುತ್ತಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net