

ವಿಜಯಪುರ: ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಗಳು ನಡೆದಾಡಿದ, ಬಸವಾದಿ ಶರಣರು ಬಾಳಿ ಬದುಕಿದ, ಆದಿಲ್ ಶಾಹಿ ಅರಸರು ಆಳಿದ ನೆಲದಲ್ಲಿ ಪದೇ ಪದೇ ಸಾಮರಸ್ಯ ಕದಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳರದ್ದು ಹೀನ ಮನಃಸ್ಥಿತಿ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.
ಆದಿಲ್ಶಾಹಿ ಅರಸರ ಆಸ್ಥಾನದಲ್ಲಿಯೇ ಛತ್ರಪತಿ ಶಿವಾಜಿ ಅವರ ತಂದೆ ಆಡಳಿತಾಧಿಕಾರಿಯಾಗಿದ್ದರು. ಸಾಹಿತ್ಯಿಕ, ಸಾಂಸ್ಕೃತಿಕವಾಗಿ, ಸಂಗೀತ ಕ್ಷೇತ್ರದಲ್ಲಿ ಎಲ್ಲರೂ ಒಟ್ಟಾಗಿದ್ದ, ಸರ್ವಜನಾಂಗದ ಶಾಂತಿ ತೋಟದಂತಿರುವ ಈ ನಾಡಿನಲ್ಲಿ ಪದೇ ಪದೇ ಮುಸ್ಲಿಂರನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿರುವುದು ಹೀನ ಮನಃಸ್ಥಿತಿಯನ್ನು ಪ್ರದರ್ಶಿಸುತ್ತದೆ. ಬಸನಗೌಡ ಎಂದು ಹೆಸರಿಟ್ಟುಕೊಂಡು ವಚನಗಳನ್ನು ಹೇಳಬೇಕಾದ ಬಾಯಿಯಲ್ಲಿ ಈ ರೀತಿ ಹೊಲಸು ಮಾತನಾಡುತ್ತಿರುವುದು ಕೆಟ್ಟ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ ಎಂದು ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಈ ಹಿಂದೆ ಮಹ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಯತ್ನಾಳ ಇದೀಗ ಕೊಪ್ಪಳದಲ್ಲಿ ಹಿಂದು ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ ಐದು ಲಕ್ಷ ರೂಪಾಯಿ ಕೊಡುವುದಾಗಿ ಹೇಳಿರುವುದು ಖಂಡನೀಯ. ಹಿಂದುತ್ವ ಎಂದರೇನು? ಹಿಂದುತ್ವ ಎನ್ನುವುದು ಜೀವನ ಪದ್ಧತಿ. ಅಂಥ ಪದ್ಧತಿಯಲ್ಲಿರುವ ನೀವು ಇಂಥ ಹೇಳಿಕೆ ನೀಡುವುದು ಸರಿಯೇ? ಲಿಂಗಾಯತ ಸಂಸ್ಕೃತಿಯಲ್ಲಿ ಜನಿಸಿದವರು ನೀವು. ಲಿಂಗಾಯಿತರಲ್ಲಿ ಮರುಳಶಂಕರರಂಥ ಮುಸ್ಲಿಂರು ಸಹ ಇದ್ಧರು. ಅದೇ ರೀತಿ ಯತ್ನಾಳರ ವಿರುದ್ಧ ವಕೀಲ ಎಸ್.ಎಸ್. ಖಾದ್ರಿ ಹೇಳಿಕೆ ಸಮರ್ಥಿಸಿಕೊಳ್ಳುವುದಿಲ್ಲ. ನಿಮ್ಮ ನಿಮ್ಮ ಜಗಳದಲ್ಲಿ ಹೆಣ್ಣುಮಕ್ಕಳನ್ನು ಎಳೆದು ತರೋದು ಯಾಕೆ? ಸದನದಲ್ಲಿ ಮಾತನಾಡಿದ್ದೇಕೆ? ಹಾಗೆ ಮಾತನಾಡುವ ಮುನ್ನ ಯಾವ ಕಾರಣಕ್ಕೆ ಖಾದ್ರಿ ಮಾತನಾಡಿದ ಎಂಬುದನ್ನೂ ಹೇಳಬೇಕಿತ್ತು. ಆರಂಭ ಮಾಡಿದ್ದು ಯಾರು? ಬಿಜೆಪಿಯಿಂದ ಉಚ್ಚಾಟನೆ ಮಾಡಿದರೂ ಬುದ್ದಿ ಬರಲಿಲ್ಲ. ಇಷ್ಟೆಲ್ಲಾ ಮಾತನಾಡುವವರು ವಿಜಯಪುರ ನಗರದಲ್ಲಿ ಮಳೆಯಿಂದಾದ ಹಾನಿ ಪರಿಶೀಲಿಸಲು ಬರುವುದಿಲ್ಲವೇ? ಎಂದು ಯತ್ನಾಳ ವಿರುದ್ಧ ಹರಿಹಾಯ್ದರಲ್ಲದೇ ಇನ್ಮುಂದೆ ಇಂಥದ್ದನ್ನೆಲ್ಲ ಸಹಿಸಲ್ಲ. ನಾನೆ ಮುಂಚೂಣಿಯಲ್ಲಿ ನಿಂತು ಗೃಹ ಸಚಿವರು, ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರೊಂದಿಗೆ ಚರ್ಚಿಸುವೆ. ಬಾಯಿ ಬಂದ್ ಮಾಡುತ್ತೇವೆ ಎಂದರು.