ಗ್ಯಾರಂಟಿ ಭರಾಟೆಯಲ್ಲೂ ರಾಜ್ಯದ ಸಮಗ್ರ ಅಭಿವೃದ್ಧಿ, ಸಾಧನಾ ಸಮಾವೇಶಗಳೇ ಬಿಜೆಪಿ ಟೀಕೆಗೆ ಉತ್ತರ ಎಂದ ಶಾಸಕ ಯಶವಂತರಾಯಗೌಡ ಪಾಟೀಲ

YASHAVANTRAYAGOUDA PATIL
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸುದ್ದಿಗೋಷ್ಠಿ ನಡೆಸಿದರು.
Published on

ವಿಜಯಪುರ: ಗ್ಯಾರಂಟಿಗಳ ಭರಾಟೆಯಲ್ಲೂ ಕರ್ನಾಟಕದ ಸಮಗ್ರ ಅಭಿವೃದ್ಧಿಯಾಗುತ್ತಿದೆ ಎಂಬುದಕ್ಕೆ ಇಂಡಿ, ಮೈಸೂರು ಮತ್ತು ತುಮಕೂರು ಭಾಗಗಳಲ್ಲಿ ನಡೆದ ಅಭಿವೃದ್ಧಿ ಪರವಾದ ಸಾಧನಾ ಸಮಾವೇಶಗಳೇ ಸಾಕ್ಷಿ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೆಮ್ಮೆ ವ್ಯಕ್ತಪಡಿಸಿದರು.

ಗ್ಯಾರಂಟಿಯಿಂದಾಗಿ ಸರ್ಕಾರದ ಬಳಿ ಅನುದಾನ ಇಲ್ಲವೆನ್ನುತ್ತಿರುವ ಪ್ರತಿಪಕ್ಷಗಳ ಟೀಕೆಗೆ ಈ ಅಭಿವೃದ್ಧಿ ಪರ ಸಮಾವೇಶಗಳು ಉತ್ತರ ಕೊಟ್ಟಂತಾಗಿದೆ. ಅಭಿವೃದ್ಧಿ ಕಾರ್ಯಕ್ರಮಗಳು ವೇಗ ಪಡೆದಿದ್ದು, ಅನುಭವಿ ನಾಯಕ ಮುಖ್ಯಮಂತ್ರಿಯಾದರೆ ಏನೆಲ್ಲ ಅಭಿವೃದ್ಧಿ ಸಾಧಿಸಬಹುದೆಂಬುದಕ್ಕೆ ಸಿದ್ದರಾಮಯ್ಯ ಸರ್ಕಾರದ ಈ ಸಾಧನೆಗಳೇ ಸಾಕ್ಷಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಜನಪರ ಸರ್ಕಾರಕ್ಕೆ ಜನ ಸಹಕಾರ ಮಾಡುವುದಲ್ಲದೇ ಅಭಿವೃದ್ಧಿಯ ಉಪಕಾರ ಸ್ಮರಿಸುತ್ತಾರೆಂಬುದಕ್ಕೆ ಇಂಡಿಯಲ್ಲಿ ಜು. 14 ರಂದು ನಡೆದ ಬೃಹತ್ ಸಮಾವೇಶವೇ ಸಾಕ್ಷಿ. ಸಾಗರೋಪಾದಿಯಲ್ಲಿ ಹರಿದು ಬಂದ ಜನರಿಂದಾಗಿ ಆ ಸಮಾವೇಶ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿತು. ಹಸಿದವರಿಗೆ ಮಾತ್ರ ಅನ್ನದ ಮಹತ್ವ ಗೊತ್ತಾಗಲು ಸಾಧ್ಯ ಎಂಬಂತೆ ನೀರಿನ ಮಹತ್ವ ಇಂಡಿ ಭಾಗದ ಜನರಿಗೆ ಮಾತ್ರ ಗೊತ್ತಿರಲು ಸಾಧ್ಯ ಎಂಬುದು ಇಂಡಿಯಲ್ಲಾದ ಸಮಾವೇಶ ಸಾಕ್ಷೀಕರಿಸಿತು. ಸಾಗರೋಪಾದಿಯಲ್ಲಿ ಬಂದ ಜನಸಾಗರ ಸಿದ್ಧರಾಮಯ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ಮೂಲಕ ಹೃದಯವಂತಿಕೆ ಮೆರೆಯಿತು. ಅಂತೆಯೇ ಮುಂದಿನ ದಿನಗಳಲ್ಲಿ ಜನರ ಈ ಸಹಕಾರ ಸ್ಮರಿಸುವುದರೊಂದಿಗೆ ಇಮ್ಮಡಿಯಾಗಿ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದ ಇಂಡಿ ಭಾಗದಲ್ಲಿ 3100 ಕೋಟಿ ರೂಪಾಯಿ ವೆಚ್ಚದ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ, 534 ಕೋಟಿ ರೂಪಾಯಿ ವೆಚ್ಚದ ಮುಳವಾಡ ಹಂತ-3ರ ತಿಡಗುಂದಿ ವಿಸ್ತೃತ ಯೋಜನೆ ಹಾಗೂ 232 ಕೋಟಿ ರೂಪಾಯಿ ವೆಚ್ಚದ ಕೆರೆಗೆ ನೀರು ತುಂಬುವ ಯೋಜನೆ ಲೋಕಾರ್ಪಣೆಗೊಳಿಸಿದ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಜನ ಸೇರಿದ್ದು ನೋಡಿದರೆ ನೀರಿನ ಮಹತ್ವ ಏನೆಂಬುದರ ಅರಿವಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಭಾವನಾತ್ಮಕವಾಗಿ ನುಡಿದರು.

ಗಡಿಭಾಗದ ಅತ್ಯಂತ ಹಿಂದುಳಿದ ತಾಲೂಕು ಕೇಂದ್ರವಾಗಿರುವ ಇಂಡಿ ಕ್ಷೇತ್ರವೊಂದರಲ್ಲೇ 4559.06 ಕೋಟಿ ಅನುದಾನದ ಶಂಕು ಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರೆ ನಾಡಿನ ನಾನಾ ಭಾಗಗಳಿಗೆ ನೀಡಿರುವ ಅನುದಾನ, ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಇನ್ನೆಷ್ಟಿರಬೇಡ ಊಹಿಸಿ. ಇಂಡಿಯೊಂದರಲ್ಲೇ 4157.44 ಕೋಟಿ ಅನುದಾನದ ಕಾಮಗಾರಿ ಶಂಕು ಸ್ಥಾಪನೆ ಹಾಗೂ 401.62 ಕೋಟಿ ಅನುದಾನದ ಕಾಮಗಾರಿಯ ಲೋಕಾರ್ಪಣೆ ನೆರವೇರಿಸಲಾಗಿದೆ. ಭವಿಷ್ಯದಲ್ಲಿ ಇಂಡಿ ಜಿಲ್ಲೆಯಾಗಲು ಬೇಕಾದ ಎಲ್ಲ ಮೂಲ ಸೌಕರ್ಯ ಕಲ್ಪಿಸಿದ್ದು ಸಂತೃಪ್ತಿ ಮತ್ತು ಸಾರ್ಥಕತೆ ಹೆಚ್ಚಿಸಿದೆ. ಇನ್ನೂ 38 ತಿಂಗಳ ಅವಧಿಯಿದ್ದು ಸಾಕಷ್ಟು ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಯಶವಂತರಾಯಗೌಡ ಪಾಟೀಲ ತಿಳಿಸಿದರು.

‘ಇಂಡಿಯಲ್ಲಾಗಿದ್ದು ಅಭಿವೃದ್ಧಿ ಸಮಾವೇಶವಲ್ಲ; ಯಶವಂತರಾಯಗೌಡರ ಶಕ್ತಿ ಪ್ರದರ್ಶನ’ ಎಂಬ ಮಾತಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಶವಂತರಾಯಗೌಡರು, ಅಭಿವೃದ್ಧಿಯೇ ಕಾಂಗ್ರೆಸ್‌ನ ಶಕ್ತಿ. ವೈಯಕ್ತಿಕ ಸಮಾವೇಶವಲ್ಲ; ಸರ್ಕಾರದ ಅಭಿವೃದ್ಧಿಯ ಸಮಾವೇಶ ಎಂದರಲ್ಲದೇ ಸಂಪುಟ ಪುನಾರಚನೆ ಸದ್ದು ಜೋರಾದ ಹೊತ್ತಿನಲ್ಲೇ ಇಂಥ ಸಮಾವೇಶ ಹಮ್ಮಿಕೊಂಡಿರುವ ಚರ್ಚೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಾ, ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ನಾಲ್ಕು ಗೋಡೆಗಳ ಮಧ್ಯೆ ನಡೆದ ಚರ್ಚೆ ಬಗ್ಗೆ ಮಾತನಾಡಲಾರೆ. ಹೈಕಮಾಂಡ್‌ಗೆ ಎಲ್ಲವೂ ಗೊತ್ತಿದೆ. ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net