

ವಿಜಯವಾಣಿ ಸುದ್ದಿಜಾಲ ಉಡುಪಿ
ತೆಂಕನಿಡಿಯೂರಿನಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಅವೈಜ್ಞಾನಿಕವಾಗಿ ಹೂತಿರುವ ಕಸ, ತ್ಯಾಜ್ಯವನ್ನು ತಕ್ಷಣ ತೆರವು ಮಾಡಲು ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು.
ತೆಂಕನಿಡಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಳಾರ್ಕಳಬೆಟ್ಟುವಿನ ತ್ಯಾಜ್ಯ ಸಂಸ್ಕರಣಾ ಘಟಕದ ಒಳಗಡೆ, ಗ್ರಾಮಕ್ಕೆ ನೀರು ಪೂರೈಸುವ ಬೋರ್ವೆಲ್ ಬಳಿಯೇ ದೊಡ್ಡ ಹೊಂಡ ತೋಡಿ ಕಸ ವಿಲೇವಾರಿ ಮಾಡಿರುವ ಕುರಿತು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಬೋರ್ವೆಲ್ ಬಳಿಯೇ ಹೊಂಡದಲ್ಲಿ ಕಸ ಹಾಕಿ ಮುಚ್ಚಿದ್ದರಿಂದ ಇದೀಗ ಮಳೆ ನೀರೂ ಸಹ ಸೇರಿಕೊಂಡು ಸಮೀಪದ ನೂರಾರು ಮನೆಗಳ ಬಾವಿ, ಬೋರ್ವೆಲ್ಗಳಲ್ಲಿ ನೀರು ಕಲುಷಿತಗೊಂಡಿದೆ. ಅಲ್ಲದೆ, ದುರ್ವಾಸನೆ ಬರುತ್ತಿದೆ. ಸಾಂಕ್ರಾಮಿಕ ರೋಗದ ಭಯ ಆವರಿಸಿದೆ ಎಂದು ಜನರು ಇದೇ ವೇಳೆ ದೂರಿದರು.
ಶಾಸಕ ಯಶ್ಪಾಲ್ ಮಾತನಾಡಿ, ಅವೈಜ್ಞಾನಿಕವಾಗಿ ಜನವಸತಿ ಪ್ರದೇಶ ಹಾಗೂ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಬಾವಿಯ ಬಳಿ ಕಸ ಹಾಕುವುದು ಎಷ್ಟು ಸರಿ? ಜನರ ಆರೋಗ್ಯದ ಜತೆ ಚೆಲ್ಲಾಟವಾಡಬೇಡಿ. ಗ್ರಾಮ ಪಂಚಾಯಿತಿಯ ಸಭೆಯಲ್ಲಿ ಈ ಬಗ್ಗೆ ಯಾವುದೇ ಸಭೆ ನಡೆಸದೆ, ಕಸ ಹೂಳುವ ಕುರಿತು ಚರ್ಚಿಸದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳದಲ್ಲಿ ಉಪಸ್ಥಿತರಿದ್ದ ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ, ಸಾಂಕ್ರಾಮಿಕ ರೋಗಗಳ ಜಿಲ್ಲಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಕೆಮ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ತಕ್ಷಣವೇ ಈ ಕುರಿತು ವರದಿ ನೀಡಬೇಕು ಎಂದು ಶಾಸಕ ಯಶ್ಪಾಲ್ ಸೂಚಿಸಿದರು.
ಈ ಸಂದರ್ಭದಲ್ಲಿ ಉಡುಪಿ ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯಾ, ಪಿಡಿಒ ದಯಾನಂದ, ಗ್ರಾಪಂ ಉಪಾಧ್ಯಕ್ಷ ಅರುಣ್, ಸದಸ್ಯ ವಿನೋದ್ ಹಾಗೂ ಸಾರ್ವಜನಿಕರು ಇದ್ದರು.
ಗ್ರಾಮಸ್ಥರು ಗ್ರಾಪಂ ವಿರುದ್ಧ ಈ ವಿಚಾರವಾಗಿಯೇ ಪ್ರತಿಭಟನೆ ನಡೆಸಿದರೂ ಸಹ ಕಸ ತೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾದ್ಯಂತ ಡೆಂಘೆ ಸಹಿತ ವಿವಿಧ ಸಾಂಕ್ರಾಮಿಕ ರೋಗ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಕಸ ಹೂತಿರುವುದು ಸರಿಯಲ್ಲ. ಜನರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆಯ ವರದಿಯಂತೆ ಗ್ರಾಪಂ ಪಿಡಿಒ ತಕ್ಷಣ ಸ್ಪಂದಿಸಿ ಹೂತಿರುವ ಕಸ ತೆರವು ಮಾಡಲು ಕ್ರಮ ಕೈಗೊಳ್ಳಬೇಕು. ಯಶ್ಪಾಲ್ ಸುವರ್ಣ. ಶಾಸಕ, ಉಡುಪಿ