ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

udp-yashpal suvarna
Published on

ಉಡುಪಿ: ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪೂರ್ವ ಸಿದ್ಧತೆ ನಡೆಸಿ ಭವಿಷ್ಯದಲ್ಲಿ ಇಂಜಿನಿಯರ್​, ವೈದ್ಯರಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಸಿಇಟಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಬ್ರಾಹ್ಮಣ ಹಾಗೂ ಇತರ ವರ್ಗದ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಯಶ್​ಪಾಲ್​ ಸುವರ್ಣ ಆಗ್ರಹಿಸಿದ್ದಾರೆ.

ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ನಡೆದ ಸಿಇಟಿ ಪರೀೆ ಸಂದರ್ಭದಲ್ಲಿ ಶಿವಮೊಗ್ಗ ಮತ್ತು ಬೀದರ್​ನಲ್ಲಿ ಅಧಿಕಾರಿಗಳು ತಪಾಸಣೆ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆದು ಹಾಕುವಂತೆ ಸೂಚಿಸಿದ್ದು, ಜನಿವಾರ ತೆಗೆಯಲು ಒಪ್ಪದ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ವಂಚಿತರನ್ನಗಿಸಿ ಉನ್ನತ ಶಿಕ್ಷಣದ ಕನಸು ನುಚ್ಚುನೂರು ಮಾಡಿದ್ದಾರೆ. ಹಿಜಾಬ್​ ಹಾಗೂ ಬುರ್ಕಾ ಧರಿಸಿ ಪರೀಕ್ಷೆ ಬರೆಯಲು ವಿಶೇಷ ಮುತುವರ್ಜಿ ತೋರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಹಿಂದೂ ಸಮಾಜದಲ್ಲಿ ಅತ್ಯಂತ ಪವಿತ್ರವಾಗಿರುವ ಜನಿವಾರ ಹಾಗೂ ಮಹಿಳಾ ವಿದ್ಯಾರ್ಥಿಗಳ ಮಂಗಳ ಸೂತ್ರವನ್ನು ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡದೆ ಹಿಂದೂ ವಿರೋಧಿ ನಿಲುವು ಮುಂದುವರೆಸಿದೆ ಎಂದು ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರದ ಸಿಬ್ಬಂದಿ ಬ್ರಾಹ್ಮಣ ವಿದ್ಯಾರ್ಥಿಗಳು ಕೈಯಲ್ಲಿ ಕಟ್ಟಿಕೊಂಡಿದ್ದ ಕಾಕಿದಾರ ಮತ್ತು ಗಾಯತ್ರಿ ದೀಕ್ಷೆ ಪಡೆದ ಜನಿವಾರವನ್ನು ತೆಗೆಸುವ ಮೂಲಕ ಬ್ರಾಹ್ಮಣ ಸಮುದಾಯ ಹಾಗೂ ಇತರ ಜನಿವಾರಿಧಾರಿ ಸಮಾಜಕ್ಕೆ ಮಾಡಿದ ಘೋರ ಅವಮಾನವಾಗಿದೆ. ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿರುವ ಸರ್ಕಾರದ ವಿರುದ್ಧ ಜನತೆ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net