

ವಿಜಯವಾಣಿ ಸುದ್ದಿಜಾಲ ಉಡುಪಿ
ಮುಂದಿನ ರಾಜ್ಯ ಬಜೆಟ್ನಲ್ಲಿ ಉಡುಪಿ ಕ್ಷೇತ್ರದ ಅಭಿವದ್ಧಿ ಯೋಜನೆಗಳಿಗೆ ವಿಶೇಷ ಅನುದಾನ ನೀಡುವಂತೆ ಹಾಗೂ ತುಳುನಾಡಿನ ಧಾರ್ಮಿಕ ಆಚರಣೆಗೆ ತಡೆಯೊಡ್ಡದೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮನವಿ ನೀಡಿದರು.
ಬೆಂಗಳೂರಿನಲ್ಲಿ ಗುರುವಾರ ಸಿಎಂ ಭೇಟಿಯಾಗಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ ಸಾಧನೆ ಮಾಡುತ್ತಿರುವ ಉಡುಪಿ ಜಿಲ್ಲೆಯ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ಹಾಗೂ ಇನ್ನಷ್ಟು ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು ಎಂದು ವಿನಂತಿಸಿದರು.
ಜಿಲ್ಲಾಸ್ಪತ್ರೆಯ ನೂತನ ಕಟ್ಟಡ ಇನ್ನೂ ಕಾರ್ಯಾರಂಭವಾಗಿಲ್ಲ. ಅದಕ್ಕೆ ಅಗತ್ಯವಿರುವ 48.36 ಕೋಟಿ ರೂ. ಹೆಚ್ಚುವರಿ ಅನುದಾನ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆಗೆ ಅನುದಾನ, ಮೀನುಗಾರಿಕಾ ಕ್ಷೇತ್ರಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಡೀಸಲ್ ಸಬ್ಸಿಡಿ, ನಾಡದೋಣಿಗಳಿಗೆ ಸೀಮೆಎಣ್ಣೆ ಪೂರೈಕೆ, ಬಂದರು ಅಭಿವೃದ್ಧಿ ಮತ್ತು ಡ್ರೆಜ್ಜಿಂಗ್, ಸೀ ಆಂಬುಲೆನ್ಸ್, ರೈತಾಪಿ ವರ್ಗಗಳಿಗೆ ನೀಡುವ ಸಾಲ ಸೌಲಭ್ಯ ಮೀನುಗಾರರಿಗೂ ವಿಸ್ತರಣೆ, ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಯಶ್ಪಾಲ್ ಒತ್ತಾಯಿಸಿದರು.
ನಾರಾಯಣ ಗುರು ಅಭಿವದ್ಧಿ ನಿಗಮಕ್ಕೆ 500 ಕೋಟಿ ರೂ. ಅನುದಾನ ಮೀಸಲು, ಪ್ರಾಕೃತಿಕ ವಿಕೋಪ ಪರಿಹಾರಕ್ಕೆ 25 ಕೋಟಿ ರೂ. ಮೀಸಲು, ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಈ ಹಿಂದಿನಂತೆ ಗರಿಷ್ಠ 5 ಲಕ್ಷ ರೂ. ಪರಿಹಾರ, ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಕೃಷಿ ಕಾಲೇಜು ಸ್ಥಾಪನೆ, ಸರ್ಕಾರಿ ಬಸ್ ಸೇವೆ ಹೆಚ್ಚಳ, ಕ್ರೀಡಾ ಚಟುವಟಿಕೆಗಳಿಗೆ ಕ್ರೀಡಾಂಗಣ ನಿಮಾರ್ಣ, ಬ್ರಹ್ಮಾವರದಲ್ಲಿ ಪ್ರವಾಸಿ ಬಂಗಲೆ, ಸರ್ಕಾರಿ ವೈದ್ಯಕೀಯ ಕಾಲೇಜು, ಪರ್ಯಾಯ ಮಹೋತ್ಸವಕ್ಕೆ ವಿಶೇಷ 25 ಕೋಟಿ ರೂ. ಅನುದಾನ, ಕೆರೆಗಳ ಅಭಿವೃದ್ಧಿ, ಕಂಬಳ ಕ್ರೀಡೆಗೆ ಅನುದಾನ, ಉಡುಪಿ ನಗರದಲ್ಲಿ ಹೆಚ್ಚುವರಿಯಾಗಿ ಉಪ ವಿಭಾಗಾಧಿಕಾರಿಗಳ ಕಚೇರಿ ಮಂಜೂರು, ಕರಾವಳಿ ಜಿಲ್ಲೆಯ ಮರಳು ಸಮಸ್ಯೆಗೆ ಪರಿಹಾರ ರೂಪಿಸಲು ಪ್ರತ್ಯೇಕ ಮರಳು ನೀತಿ ಜಾರಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ತುಳುನಾಡಿನ ಸಾಂಪ್ರದಾಯಿಕ ಧಾರ್ಮಿಕ ಆಚರಣೆಯಾದ ಕಂಬಳ, ಯಕ್ಷಗಾನ, ನೇಮೋತ್ಸವ, ನಾಗಮಂಡಲ ಹಾಗೂ ದೈವಾರಾಧನೆಯ ಚೌಕಟ್ಟಿನಲ್ಲಿ ರಕ್ತಾಹಾರದ ಕಲ್ಪನೆಯಲ್ಲಿ ನಡೆಯುವ ಕೋಳಿ ಅಂಕಗಳಿಗೆ ಜಿಲ್ಲಾಡಳಿತ ತಡೆ ಒಡ್ಡಿದೆ. ಕಠಿಣ ನಿಯಮಾವಳಿ ರೂಪಿಸಿದ್ದರಿಂದ ಆಚರಣೆಗೆ ತೊಂದರೆಯಾಗುತ್ತಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಸಿಎಂ ಗಮನಕ್ಕೆ ತಂದರು. ಮನವಿ ಸ್ವೀಕರಿಸಿದ ಸಿದ್ದರಾಮಯ್ಯ, ತುಳುನಾಡಿನ ಧಾರ್ಮಿಕ ಆಚರಣೆಗೆ ಅವಕಾಶ ನೀಡುವ ಭರವಸೆ ನೀಡಿದರು.