ಉಡುಪಿ ಕಡಲ ತೀರದಲ್ಲಿ ಚಿಕ್ಕಿ ತಿಂದು ಹೋದ ಸಚಿವೆ ಲಕ್ಷ್ಮೀ

Published on

ಶಾಸಕ ಯಶ್​ಪಾಲ್​ ವ್ಯಂಗ್ಯ | ಕಾಟಾಚಾರಕ್ಕೆ ಮಳೆಹಾನಿ ಪರಿಶೀಲನೆ ಆರೋಪ

ಉಡುಪಿ: ಜಿಲ್ಲೆಯ ಜನತೆಯ ತೀವ್ರ ಆಕ್ರೋಶದ ಬಳಿಕ ಒಲ್ಲದ ಮನಸ್ಸಿನಿಂದಲೇ ಕಾಟಾಚಾರಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಭಾನುವಾರ ಉಡುಪಿಗೆ ಆಗಮಿಸಿದ್ದು, ಅಧಿಕಾರಿಗಳೊಡನೆ ಅವರು ನಡೆಸಿದ ಮಳೆಹಾನಿ ವೀಕ್ಷಣೆಯು ಸಮುದ್ರ ವಿಹಾರಕ್ಕೆ ಬಂದು ಚಿಕ್ಕಿ ತಿಂದು ಹೋದಂತಾಗಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ವ್ಯಂಗ್ಯವಾಡಿದ್ದಾರೆ.

UDP-21-4-Yashpal
ಯಶ್​ಪಾಲ್​ ಸುವರ್ಣ. ಶಾಸಕ, ಉಡುಪಿ

ಉಡುಪಿ ಜಿಲ್ಲೆಯ ಎಲ್ಲ 5 ಕ್ಷೇತ್ರದಲ್ಲಿ ಬಿಜೆಪಿ ಶಾಸಕರೇ ಇದ್ದಾರೆಂಬ ಕಾರಣದಿಂದ ಸ್ಥಳೀಯ ಶಾಸಕನಾದ ನನಗೂ ಸಹ ಯಾವುದೇ ಮಾಹಿತಿ ನೀಡದೆ ಅಧಿಕಾರಿಗಳೊಂದಿಗೆ ತೆರಳಿ ಹಾನಿ ಪರಿಶೀಲನೆಯ ಪ್ರಹಸನ ಮಾಡಿದ್ದಾರೆ. ಜಿಲ್ಲೆಯ ಎಲ್ಲ ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಜಿಲ್ಲೆಯಲ್ಲಿ ಆಗಿರುವ ಹಾನಿಗಳ ಬಗ್ಗೆ ಸಭೆ ನಡೆಸಿಲ್ಲ. ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ವಹಿಸಿಲ್ಲ ಎಂದು ಆರೋಪಿಸಿದ್ದಾರೆ.

ಜಿಲ್ಲೆಯ ಶಾಸಕರ ಆಕ್ರೋಶ

ಉಡುಪಿ ಜಿಲ್ಲೆಯ ಕಾಪು, ಉಡುಪಿ, ಕುಂದಾಪುರ, ಬೈಂದೂರು, ಕಾರ್ಕಳ ಕ್ಷೇತ್ರದಲ್ಲಿಯೂ ಮಳೆಯಿಂದ ವ್ಯಾಪಕ ಆಸ್ತಿ-ಪಾಸ್ತಿ ಹಾನಿಯಾಗಿದೆ. ಕಡಲ್ಕೊರೆತ, ಬೆಳೆ ಹಾನಿ, ಗುಡ್ಡ ಕುಸಿತದಂತಹ ಘಟನೆ ನಡೆದಿದೆ. ಆದರೂ ಜಿಲ್ಲೆಯ ಬಗ್ಗೆ ಸಚಿವೆ ಹೆಬ್ಬಾಳ್ಕರ್​ ರ್ನಿಲಕ್ಷ್ಯ ವಹಿಸಿದ್ದಾರೆ ಎಂದು ಶಾಸಕರಾದ ಸುನೀಲ್​ಕುಮಾರ್​, ಸುರೇಶ್​ ಶೆಟ್ಟಿ ಗುರ್ಮೆ, ಕಿರಣಕುಮಾರ್​ ಕೊಡ್ಗಿ, ಗುರುರಾಜ್​ ಗಂಟಿಹೊಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಹಲವು ಬಾರಿ ಘೋಷಿಸಿರುವ ಕಡಲ್ಕೊರೆತ ತಡೆಯ 5 ಕೋಟಿ ರೂ., ಪರ್ಯಾಯ ಮಹೋತ್ಸವದ ವಿಶೇಷ 10 ಕೋಟಿ ರೂ. ಅನುದಾನ ಇನ್ನೂ ಬಂದಿಲ್ಲ ಎಂದು ಯಶ್​ಪಾಲ್​ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ 14 ತಿಂಗಳಲ್ಲಿ ಕೇವಲ ಒಮ್ಮೆ ಮಾತ್ರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಅವರ ಅವಧಿಯಲ್ಲಿ ಉಡುಪಿ ಜಿಲ್ಲೆಗೆ ಬಂದ ಅನುದಾನಗಳ ಬಗ್ಗೆ ದಾಖಲೆ ನೀಡಲಿ. ಆ ಕುರಿತು ಬಹಿರಂಗ ಚರ್ಚೆಗೂ ಬದ್ಧನಿದ್ದೇನೆ. ಜಿಲ್ಲೆಯ ಜನತೆಗೆ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹಾಗೂ ರಾಜ್ಯ ಸರ್ಕಾರದ ಮೇಲೆ ಯಾವುದೇ ನಿರೀಕ್ಷೆ, ನಂಬಿಕೆ ಇನ್ನು ಉಳಿದಿಲ್ಲ. ಯಶ್​ಪಾಲ್​ ಸುವರ್ಣ. ಶಾಸಕ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net