ಬಿಪಿಎಲ್​ ಕಾರ್ಡ್ ರದ್ದು ಪಡಿಸಿದರೆ ರಾಜ್ಯವ್ಯಾಪಿ ಹೋರಾಟ

Yashpal
Published on

ಶಾಸಕ ಯಶ್​ಪಾಲ್​ ಸುವರ್ಣ ಎಚ್ಚರಿಕೆ

ಕಾಂಗ್ರೆಸ್​ ಸರ್ಕಾರ ದಿವಾಳಿಯೆಂದು ಟೀಕೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಯಾವುದೇ ಸಮೀಕ್ಷೆ ನಡೆಸದೆ ತಮ್ಮ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಬಡ ಜನರ ಬಿಪಿಎಲ್​ ಕಾರ್ಡ್​ ರದ್ದುಪಡಿಸಲು ರಾಜ್ಯ ಕಾಂಗ್ರೆಸ್​ ಸರ್ಕಾರ ಹುನ್ನಾರ ನಡೆಸುತ್ತಿದೆ. ಬಿಪಿಎಲ್​ ರದ್ದುಪಡಿಸಿದರೆ ಸೌಲಭ್ಯ ವಂಚಿತರೊಂದಿಗೆ ಸೇರಿ ಬಿಜೆಪಿಯ ಜನಪ್ರತಿನಿಧಿಗಳು ರಾಜ್ಯವ್ಯಾಪಿ ಪ್ರತಿಭಟನೆ ನಡೆಸುತ್ತೇವೆ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಎಚ್ಚರಿಕೆ ನೀಡಿದರು.

ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ 40 ಸಾವಿರದಷ್ಟು ಬಿಪಿಎಲ್​ ಕಾರ್ಡ್​ ರದ್ದು ಮಾಡುವ ಪ್ರಕ್ರಿಯೆ ನಡೆದಿದೆ. ಇದನ್ನು ಕೈಬಿಡದಿದ್ದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಧರಣಿ ಮಾಡುತ್ತೇವೆ ಎಂದರು.

ಯಾವುದಕ್ಕೂ ಅನುದಾನ ಇಲ್ಲ

ಅಂಗನವಾಡಿ ಕಾರ್ಯಕರ್ತೆಯರು, ಶಾಲೆಯ ಅಡುಗೆ ಸಿಬ್ಬಂದಿಗೆ ಸಕಾಲಕ್ಕೆ ವೇತನವಿಲ್ಲ. ಹೈನುಗಾರರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ನಿಗಮ ಮಂಡಳಿಗಳ ನೌಕರರಿಗೆ 4-5 ತಿಂಗಳಿಂದ ವೇತನವಿಲ್ಲ. ವಿಎಗಳೂ ಸಹ ಮುಷ್ಕರ ಮಾಡುತ್ತಿದ್ದು ಸಾರ್ವಜನಿಕ ಸೇವೆಗೂ ಧಕ್ಕೆಯಾಗಿದೆ. ವಿದ್ಯುತ್​ ಬಿಲ್​ ಭರಿಸದ್ದರಿಂದ ಶಾಲಾ-ಕಾಲೇಜು, ಸರ್ಕಾರಿ ಕಟ್ಟಡಗಳ ವಿದ್ಯುತ್​ ಸಂಪರ್ಕ ಕಡಿತ ಮಾಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್​ಐ ಸ್ಕ್ಯಾನಿಂಗ್​ ಸೇವೆ ವ್ಯತ್ಯಯಗೊಂಡಿದೆ. ಯಾವುದಕ್ಕೂ ಅನುದಾನ ಇಲ್ಲವಾಗಿದ್ದು ಈ ಸರ್ಕಾರ ದಿವಾಳಿಯಾಗಿದೆ ಎಂದರು.

ಮಳೆಹಾನಿ ಪರಿಹಾರವಿಲ್ಲ

ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ಅನುದಾನ ಬರುತ್ತಿಲ್ಲ. ಏಕವಿನ್ಯಾಸದ ಅನುಮೋದನೆಯಿಂದಾಗಿ ಹಳ್ಳಿಗಳಲ್ಲಿ ಮನೆ ನಿರ್ಮಿಸಲಾಗುತ್ತಿಲ್ಲ. ಪ್ರಸಕ್ತ ಮಳೆಗಾಲದಲ್ಲಿ ಜಿಲ್ಲೆಯಲ್ಲಿ 234 ಕೋಟಿ ರೂ. ನಷ್ಟ ಆಗಿರುವ ಕುರಿತು ಜಿಲ್ಲಾಡಳಿತ ವರದಿ ನೀಡಿ ಎರಡು ತಿಂಗಳಾದರೂ ಪರಿಹಾರ ಬಿಡುಗಡೆಯಾಗಿಲ್ಲ. ಗ್ಯಾರಂಟಿಗಳಿಗೂ ಅನುದಾನ ಬಿಡುಗಡೆ ಮಾಡದೆ, ಕಾಂಗ್ರೆಸ್​ ಕಾರ್ಯಕರ್ತರಿಗಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿ ಕೋಟ್ಯಂತರ ರೂ.ವೇತನಕ್ಕಾಗಿ ವ್ಯಯಿಸಿ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆ ಎಂದರು.

ರಾಜ್ಯದ ಜನತೆಗೆ ಮೋಸ

ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ನಾಲ್ಕು ತಿಂಗಳಾಗಿದೆ. ಅನ್ನಭಾಗ್ಯದ ಅಕ್ಕಿಯೂ ಇಲ್ಲ, ಅದರ ಹಣ ಪಾವತಿಯೂ ಆಗಿಲ್ಲ. ಗೃಹಜ್ಯೋತಿ ಭಾಗ್ಯ ನನೆಗುದಿಗೆ ಬಿದ್ದಿದ್ದು, ವಿದ್ಯುತ್​ ಬಿಲ್​ ಏರಿಕೆಯಿಂದ ರಾಜ್ಯದ ಜನರಿಗೆ ಶಾಕ್​ ನೀಡಿದ್ದಾರೆ. ಯುವ ನಿಧಿ ಯೋಜನೆ ಹಳ್ಳ ಹಿಡಿದಿದೆ. ಅವೈಜ್ಞಾನಿಕವಾಗಿ ಈ ಎಲ್ಲ ಯೋಜನೆ ಘೋಷಿಸಿ ಈಗ ಇದೀಗ ರಾಜ್ಯದ ಜನತೆಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಕಮಲಾಕ್ಷ ಹೆಬ್ಬಾರ್​, ಪ್ರ.ಕಾರ್ಯದರ್ಶಿ ಪುಷ್ಪರಾಜ್​ ಶೆಟ್ಟಿ, ನಗರಸಭಾ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಶ್ಯಾಮ್​ ಪ್ರಸಾದ್​ ಭಟ್​ ಉಪಸ್ಥಿತರಿದ್ದರು.

ಅನ್ಯಾಯದ ಆರನೇ ಗ್ಯಾರಂಟಿ ಯೋಜನೆ

ರಾಜ್ಯದ ಸಣ್ಣ ರೈತರು, ಕೂಲಿ ಕಾರ್ಮಿಕರು ಮತ್ತು ಕಡುಬಡವರ ಬಿಪಿಎಲ್​ ಕಾರ್ಡ್​ ರದ್ದುಗೊಳಿಸುವುದು ಕಾಂಗ್ರೆಸ್​ ಸರ್ಕಾರದ ಅನ್ಯಾಯದ ಆರನೇ ಗ್ಯಾರಂಟಿ ಯೋಜನೆಯಾಗಿದೆ. ಪ್ರತಿ ಗ್ರಾಮದ 400ಕ್ಕಿಂತಲೂ ಹೆಚ್ಚು ಕುಟುಂಬಗಳ ಬಿಪಿಎಲ್​ ಕಾರ್ಡ್​ಗಳ ಪಟ್ಟಿಯನ್ನು ಪರಿಶೀಲನೆಗೆ ಸ್ಥಳೀಯ ರೇಷನ್​ ಅಂಗಡಿಗೆ ಕಳುಹಿಸಿದ್ದಾರೆ. ಬಡ ಕುಟುಂಬದ ಹೆಣ್ಣು ಮಗಳೊಬ್ಬಳು ಸ್ಟೇಷನರಿ ಅಂಗಡಿ ಅಥವಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ ಸಂಬಳ ಬ್ಯಾಂಕ್​ ಖಾತೆಗೆ ಜಮಾ ಆಗಿದ್ದರೆ ಅಂತಹ ಕುಟುಂಬದ ರೇಷನ್​ ಕಾರ್ಡ್​ ರದ್ದು ಮಾಡುವುದು ಪರಿಶೀಲನಾ ಪಟ್ಟಿಯಲ್ಲಿದೆ. ಸರ್ಕಾರ ಈ ಮಾನದಂಡ ಬದಲಿಸಿ, ಮನೆಮನೆ ಸಮೀಕ್ಷೆ ನಡೆಸಿ ಅವರ ಸ್ಥಿತಿಗತಿ ಅರಿತ ಮೇಲೆಯೇ ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದು ಯಶ್​ಪಾಲ್​ ಸುವರ್ಣ ಹಾಗೂ ರೈತಮೋರ್ಚಾ ಜಿಲ್ಲಾಧ್ಯಕ್ಷ ಕಮಲಾಕ್ಷ ಹೆಬ್ಬಾರ್​ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net