ಶಿಕ್ಷಣದಂತೆ ಕ್ರೀಡಾ ಕ್ಷೇತ್ರದಲ್ಲೂ ದಾಖಲೆ ನಿರ್ಮಿಸಿ

Kreede Lead
Published on

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಕರೆ

ಪ.ಪೂ. ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ

ವಿಜಯವಾಣಿ ಸುದ್ದಿಜಾಲ ಉಡುಪಿ

ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿಯಲ್ಲಿ ನಿರಂತರ ಪ್ರಥಮ ಸ್ಥಾನ ಗಳಿಸುವ ಮೂಲಕ ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಸದಾ ಮುಂಚೂಣಿಯಲ್ಲಿದೆ. ಅದರಂತೆ ಕ್ರೀಡಾಕ್ಷೇತ್ರದಲ್ಲಿಯೂ ಸಾಧನೆ ಮೂಲಕ ದಾಖಲೆ ನಿರ್ಮಿಸಿ ಉಡುಪಿ ಜಿಲ್ಲೆಯ ಕೀರ್ತಿ ಹೆಚ್ಚಿಸುವಂತಾಗಬೇಕು ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಶಯ ವ್ಯಕ್ತಪಡಿಸಿದರು.

ಉಡುಪಿಯ ಅಜ್ಜರಕಾಡುನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಉಡುಪಿ ಆಶ್ರಯದಲ್ಲಿ ಬುಧವಾರ (ಆ.29) ಆಯೋಜಿಸಿದ್ದ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ಎರಡು ದಿನಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ 2025-26ಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ

ಉಡುಪಿ ಜಿಲ್ಲಾ ಪ.ಪೂ. ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಂಜುನಾಥ್​ ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವು ಶೈಕ್ಷಣಿಕವಲ್ಲದೆ ವಿವಿಧ ಚಟುವಟಿಕೆಗಳಲ್ಲೂ ತೊಡಗಿಕೊಂಡಿದೆ. ಕ್ರೀಡಾಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ.ಪೂ. ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಹಕಾರದಲ್ಲಿ ಕ್ರೀಡಾಕೂಟ ಆಯೋಜಿಸಿದ್ದೇವೆ. ಜಿಲ್ಲೆಯ ಒಟ್ಟು 106 ಕಾಲೇಜುಗಳಿಂದ 700ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದಾರೆ ಎಂದರು.

ಶಾಲಾ ಶಿಕ್ಷಣ ಇಲಾಖೆ (ಪ.ಪೂ.)ಯ ಪ್ರಭಾರ ಉಪನಿರ್ದೇಶಕಿ ಲೀಲಾಬಾಯಿ ಭಟ್​, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಷನಕುಮಾರ್​ ಶೆಟ್ಟಿ, ಜಿಲ್ಲಾ ಅಮೆಚೂರ್​ ಅಥ್ಲೆಟಿಕ್​ ಅಸೋಸಿಯೇಷನ್​ ಅಧ್ಯಕ್ಷ ಹರಿಪ್ರಸಾದ್​ ರೈ, ಸಂಘದ ಕಾರ್ಯದರ್ಶಿ ರಮೇಶ್​ ಎಸ್​.ಸಿ., ಗೌರವಾಧ್ಯಕ್ಷ ಜೀವನಕುಮಾರ್​ ಶೆಟ್ಟಿ, ಕ್ರೀಡಾ ಸಂಚಾಲಕ ಸಂತೋಷ್​, ಖಜಾಂಚಿ ಹರಿಪ್ರಸಾದ್​, ದೈಹಿಕ ಶಿಕ್ಷಣ ಉಪನ್ಯಾಸಕರ ಸಂದ ಅಧ್ಯಕ್ಷ ಸತೀಶ್​ ಹೆಗ್ಡೆ ಉಪಸ್ಥಿತರಿದ್ದರು.

ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಸ್ವಾಗತಿಸಿದರು. ಇಲಾಖೆಯ ಜಿಲ್ಲಾ ಕ್ರೀಡಾ ಸಂಯೋಜಕ ದಿನೇಶಕುಮಾರ್​ ವಂದಿಸಿದರು. ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.

Jyothi MLA
ಕಾರ್ಯಕ್ರಮದ ಆರಂಭದಲ್ಲಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು. ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಶಾಸಕ ಯಶ್​ಪಾಲ್​ ಸುವರ್ಣ ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ರಕ್ಷಿತಾ, ಅನನ್ಯಾ, ನೈಮಿಷಾ ಹಾಗೂ ಪೂರ್ಣಿಮಾ ಅವರಿಂದ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಮೊದಲ ದಿನದ ಕ್ರೀಡಾಕೂಟದಲ್ಲಿ ಬಾಲಕ-ಬಾಲಕಿಯರಿಗೆ ಪ್ರತ್ಯೇಕವಾಗಿ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಡಿಸ್ಕಸ್​ ಥ್ರೋ, ಜಾವಲಿನ್​ ಥ್ರೋ, ಹ್ಯಾಮರ್​ ಥ್ರೋ, ಶಾಟ್​ ಪುಟ್​, ರಿಲೇ, ಹರ್ಡಲ್ಸ್​ ಸೇರಿದಂತೆ 24 ಬಗೆಯ ಕ್ರೀಡೆ ನಡೆಯಿತು.

ಕರಾವಳಿ ಭಾಗದಲ್ಲಿ ಕಬಡ್ಡಿ ವಿಭಾಗಕ್ಕೆ ಯತ್ನ

Flag
ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್​. ಅರುಣ ಮಾಚಯ್ಯ ಮಾತನಾಡಿ, ಜಿಲ್ಲಾಡಳಿತ ಅಥವಾ ಸರ್ಕಾರದ ವತಿಯಿಂದ ಇಂತಹ ಕ್ರೀಡಾಕೂಟ ಆಯೋಜಿಸಲಾಗುತ್ತದೆ. ಆದರೆ, ಉಡುಪಿಯಲ್ಲಿ ಪ್ರಾಂಶುಪಾಲರ ಸಂಘದಿಂದ ಕ್ರೀಡಾಕೂಟ ನಡೆಸುತ್ತಿರುವುದು ನಿಜಕ್ಕೂ ಮಾದರಿ. ದೇಸೀಯ ಕ್ರೀಡೆಯಾಗಿರುವ ಕಬಡ್ಡಿ ಇಂದು ರಾಷ್ಟ್ರೀಯ ಪಂದ್ಯವಾಗಿ ಮಿಂಚುತ್ತಿದೆ. ಐಪಿಎಲ್​, ಕೆಪಿಎಲ್​ ಮಾದರಿಯಲ್ಲೇ ಸ್ಪರ್ಧೆ ಆಯೋಜನೆಗೊಳ್ಳುತ್ತಿದೆ. ಹೀಗಾಗಿ ಕಬಡ್ಡಿಗೆ ಇನ್ನಷ್ಟು ಪ್ರೋತ್ಸಾಹ ಹಾಗೂ ಬಲಿಷ್ಠ ತಂಡ ಕಟ್ಟಲು ಕರಾವಳಿ ಭಾಗದಲ್ಲಿ ಕಬಡ್ಡಿ ವಿಭಾಗ ತೆರೆಯಲು ಚಿಂತನೆ ನಡೆಸಲಾಗಿದೆ. ಈ ವಿಚಾರವಾಗಿ ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಉಡುಪಿಯಲ್ಲಿರುವ ಈ ಬೃಹತ್​ ಕ್ರೀಡಾಂಗಣದಿಂದ ಜಿಲ್ಲೆಯ ಕ್ರೀಡಾಪಟುಗಳಿಗೆ ಅನುಕೂಲವಾಗಿದೆ. ಇಲ್ಲಿರುವಷ್ಟು ಕ್ರೀಡಾ ಸೌಲಭ್ಯ ರಾಜ್ಯದ ಬೇರಾವ ಜಿಲ್ಲೆಯಲ್ಲೂ ಇಲ್ಲ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ನಡೆಸುವಷ್ಟು ಸೌಕರ್ಯ ಇಲ್ಲಿದ್ದು, ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಒಲಿಂಪಿಕ್​ ಕ್ರೀಡಾಕೂಟದಲ್ಲಿ ಪಾಲ್ಗೊಂಡು ದೇಶದ ಕೀರ್ತಿ ಪಸರಿಸಬೇಕು.

| ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net